ನೇತ್ರಾವತಿ ಹೀರೋಗಳನ್ನು ಸನ್ಮಾನಿಸಿ ನಿಶಾಂತ್ ಮನೆಯವರಿಗೆ ಸಾಂತ್ವನ ಹೇಳಿ ಧನಸಹಾಯ ನೀಡಿದ ಜಮಾಅತೆ ಇಸ್ಲಾಮೀ ಹಿಂದ್

0
2370

ಸನ್ಮಾರ್ಗ ವಾರ್ತೆ

ಮಂಗಳೂರು,ಮೇ.27: ಇತ್ತೀಚಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕದ ನಿಶಾಂತ್‌ನನ್ನು ಬದುಕಿಸಲು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀರಿಗೆ ಹಾರಿ ಹರಸಾಹಸಪಟ್ಟ ಗೂಡಿನ ಬಳಿಯ ತೌಸೀಫ್‌, ಸಮೀರ್‌, ಮುಹಮ್ಮದ್, ಝಾಹಿದ್‌, ಅಕ್ಕರಂಗಡಿಯ ಆರಿಫ್‌ ಮತ್ತು ಮುಖ್ತಾರ್‌ರ ನಿವಾಸಗಳಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ಜಿಲ್ಲಾ ಸಮಿತಿ ಪ್ರತಿಯೊಬ್ಬರನ್ನೂ ಅಭಿನಂದಿಸಿತು.

ಎಲ್ಲ ಜೀವರಕ್ಷಕ ಹೋರಾಟಗಾರರಿಗೆ ಬೋಳಂಗಡಿ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್‌ ಮತ್ತು ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ಜಿಲ್ಲಾ ಸಾರ್ವಜನಿಕ ಸಂಪರ್ಕ ಸಂಚಾಲಕರಾದ ಅಮೀನ್‌ ಅಹ್ಸನ್‌ರ ನೇತೃತ್ವದ ನಿಯೋಗ ಗೌರವ ಧನ ನೀಡಿ ಸನ್ಮಾನಿಸಲಾಯಿತು. ಜಾತಿ,ಮತ ಬೇಧವಿಲ್ಲದೆ ಸದಾ ಸಮಾಜ ಸೇವೆಯಲ್ಲಿ ನಿರತರಾಗಿ, ಅಲ್ಲಾಹನ ಧರ್ಮದ ಸಾಕ್ಷಿಗಳಾಗಬೇಕೆಂದು ಯಹ್ಯಾ ತಂಙಳ್‌‌ರವರು ಸಂದರ್ಭೋಚಿತ ಉಪದೇಶ ನೀಡಿದರು.

ತದನಂತರ ಕಲ್ಲಡ್ಕದ ಬಾಡಿಗೆ ಮನೆಯಲ್ಲಿ ಬಹಳ ಕಷ್ಟದ ಬದುಕು ಸವೆಸುತ್ತಿರುವ ಮೃತ ನಿಶಾಂತ್‌ನ‌ ಕುಟುಂಬವನ್ನೂ ನಿಯೋಗವು ಸಂದರ್ಶಿಸಿತಲ್ಲದೇ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಸಹಾಯಧನವನ್ನು ನೀಡಿತು. ನಿಯೋಗದಲ್ಲಿ ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಮುಹಮ್ಮದ್ ಮುಹ್ಸಿನ್, ಪಾಣೆಮಂಗಳೂರು ಜಮಾಅತ್‌ನ ಸ್ಥಾನೀಯ ಅಧ್ಯಕ್ಷರಾದ ಮುಖ್ತಾರ್‌ ಅಹ್ಮದ್‌, ಮುಹಮ್ಮದ್ ಮೆಡಿಕಲ್‌ ಬೋಳಂಗಡಿ, ಅಬ್ದುಶ್ಶುಕೂರ್ ಬೋಳಂಗಡಿ, ಮುಸ್ತಫಾ ಬೋಳಂಗಡಿ, ನೇತ್ರಾವತಿ ವೀರ ಅಬ್ದುಲ್ ಸತ್ತಾರ್‌ ಗೂಡಿನಬಳಿ, ಆದಮ್‌ ಸಾಬ್‌ ಅಕ್ಕರಂಗಡಿ, ರಿಝ್ವಾನ್‌ ಬೋಳಂಗಡಿ, ಶಂಶೀರ್ ಮೆಲ್ಕಾರ್‌, ತಮೀಝ್‌ ಕಾರಾಜೆ, ಜಮಾಅತೆ ಇಸ್ಲಾಮೀ ಕಲ್ಲಡ್ಕ ಶಾಖೆಯ ಸದಸ್ಯರಾದ ಇಮಾರತ್‌ ಅಲಿ ಮುಂತಾದವರು ಉಪಸ್ಥಿತರಿದ್ದರು.

ಇದಲ್ಲದೇ ವೆಲ್ಫೇರ್ ಪಾರ್ಟಿಯು ಸಂಜೀವಿನಿ ಪ್ರಶಸ್ತಿಯನ್ನು ಜೀವರಕ್ಷಕರಿಗೆ ಪ್ರಧಾನ ಮಾಡಿದ್ದು, ಯುವಕರ ಸಾಧನೆಯನ್ನು ಸ್ಥಳೀಯ ಮತ್ತಿತರ ಊರಿನ ಸಂಘಟನೆಗಳು ಮತ್ತು ಮಾಧ್ಯಮಗಳು ಗುರುತಿಸುತ್ತಿವೆ. ಆದರೆ ಜಿಲ್ಲಾ, ತಾಲೂಕುಮಟ್ಟದ ಆಡಳಿತದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದಿದೆ.

ಜೀವರಕ್ಷಕರ ಹೆಸರುಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳಿಗೆ ಶಿಫಾರಸು ಮಾಡಬೇಕು. ಜೀವ ರಕ್ಷಣಾ ಸರಂಜಾಮುಗಳನ್ನು ಅವರಿಗೆ ಒದಗಿಸುವ ವ್ಯವಸ್ಥೆಯಾಗಬೇಕಿದೆ. ಸರಕಾರವು ಇಂತಹ ಸಾಹಸಿಗರನ್ನು ಗುರುತಿಸಲು ಮುನಮದಾಗಬೇಕಿದೆ ಎಂದು ವೆಲ್ಫೇರ್ ಪಾರ್ಟಿ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದೆ.