ಝಕಾತ್ ಹಣದಿಂದ ಆಸ್ಪತ್ರೆಗೆ 10 ಬೆಡ್‌ಗಳ ಸುಸಜ್ಜಿತ ಐಸಿಯು ಘಟಕವನ್ನು ಈದ್‌ನ ದಿನ ಕೊಡುಗೆಯಾಗಿ ನೀಡಿದ ಮುಸ್ಲಿಮರು

0
1388

ಸನ್ಮಾರ್ಗ ವಾರ್ತೆ

ಮುಂಬೈ,ಮೇ.27:ಝಕಾತ್ ಸಂಗ್ರಹದ ಮೂಲಕ ಸುಮಾರು 36 ಲಕ್ಷ ರೂ. ಮೌಲ್ಯದ ಸುಸಜ್ಜಿತ ಐಸಿಯು ಘಟಕವನ್ನು(ತೀವ್ರ ನಿಗಾ ಘಟಕ) ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಅವಿಸ್ಮರಣೀಯ ಘಟನೆಯು ಮಹಾರಾಷ್ಟ್ರದ ಇಚಲ್ಕರಂಜಿ ಎಂಬಲ್ಲಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಬೀಳುತ್ತಿರುವ ಹೆಚ್ಚಿನ ಒತ್ತಡವನ್ನು ಗಮನಿಸಿ ಮುಸ್ಲಿಮರು ಈದ್ ಸಂದರ್ಭ ನೀಡಲಾಗುವ ಝಕಾತ್‌ನ (ಕಡ್ಡಾಯ ದಾನ) 36 ಲಕ್ಷ ರೂ. ಹಣವನ್ನು ಇಂದಿರಾ ಗಾಂಧಿ ಸ್ಮಾರಕ ಸಿವಿಲ್ ಆಸ್ಪತ್ರೆಯಲ್ಲಿ  ತೀವ್ರ ನಿಗಾ ಘಟಕ ಸ್ಥಾಪಿಸಲು ಕೊಡುಗೆಯಾಗಿ ನೀಡಿದ್ದಾರೆ.

ಹತ್ತು ಹಾಸಿಗೆಗಳ ಸಾಮರ್ಥ್ಯ ಹೊಂದಿದ ಸುಸಜ್ಜಿತ ಐಸಿಯು ಘಟಕವನ್ನು ಸೋಮವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು,“ಈ ಪಟ್ಟಣದ ಮುಸ್ಲಿಮರು ತಮ್ಮ ಉದಾತ್ತ ಕಾರ್ಯದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಲ್ಲಿಯ ತನಕ ನಾವು ಈ ಕೊರೋನವೈರಸ್ ಅನ್ನು ದಿಟ್ಟತನದಿಂದ ಹಾಗೂ ತಾಳ್ಮೆಯಿಂದ ಎದುರಿಸಿದ್ದೇವೆ. ಇದರ ವಿರುದ್ಧ ಹೋರಾಡಲು ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಹಬ್ಬಗಳನ್ನು ಅರ್ಥಪೂರ್ಣವಾಗಿ ಹೇಗೆ ಆಚರಿಸಬೇಕೆಂದು ಮುಸ್ಲಿಂ ಸಮುದಾಯ ತೋರಿಸಿಕೊಟ್ಟಿದೆ” ಎಂದರು.

ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಯೂ ಅನುದಾನದ ಕೊರತೆಯಿಂದಾಗಿ ಸೌಲಭ್ಯಗಳು ಹಾಗೂ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿತ್ತು. ಹೊಸ ಐಸಿಯು ಘಟಕದಿಂದಾಗಿ ಆಸ್ಪತ್ರೆಯು ಪುನಶ್ಚೇತನ ಪಡೆಯಬಹುದೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಅಂದಹಾಗೆ, ಇಚಲ್ಕರಂಜಿ ಪಟ್ಟಣದಲ್ಲಿ 2.88 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ಶೇ 78.32ರಷ್ಟು ಮಂದಿ ಹಿಂದುಗಳು ಹಾಗೂ ಶೇ 15.98ರಷ್ಟು ಮಂದಿ ಮುಸ್ಲಿಮರು ನೆಲೆಸಿದ್ದಾರೆ. ಹೆಚ್ಚಿನ ಜನರು ವಿದ್ಯುತ್ ಮಗ್ಗಗಳಲ್ಲಿ ನೇಯುವಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ.