ಸನ್ಮಾರ್ಗ ವಾರ್ತೆ
ಕೇರಳ,ಜೂ.11: ಮಿಥುನ ಮಾಸದ ಪೂಜೆ, ಉತ್ಸವದ ವೇಳೆ ಶಬರಿಮಲೆಯಲ್ಲಿ ಭಕ್ತರಿಗೆ ದರ್ಶನ ಅವಕಾಶ ಮಾಡಿಕೊಡುವ ಸರಕಾರ ಮತ್ತು ದೇವಸ್ವಂ ಮಂಡಳಿಯ ತೀರ್ಮಾನದ ವಿರುದ್ಧ ಅಯ್ಯಪ್ಪ ಸೇವಾ ಸಮಾಜಂ ಹೈಕೋರ್ಟಿನ ಮೊರೆ ಹೋಗಿದೆ. ಅದು ಸರಕಾರದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಬೇಕೆಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಕೊರೋನ ವ್ಯಾಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಸರಕಾರ ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡಬಾರದು. ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು , ಈ ವಿಷಯದಲ್ಲಿ ಹೈಕೋರ್ಟು ಮಧ್ಯಪ್ರವೇಶಿಸಿ ತುರ್ತು ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಗುಂಪಾಗಿ ಭಕ್ತರು ಶಬರಿಮಲೆಗೆ ಬಂದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಲಾಕ್ಡೌನ್ ಸಡಿಲಿಕೆ ಅನುಮತಿಸಲಾಗಿದ್ದರೂ ಕೊರೋನ ಭೀತಿ ನಿವಾರಣೆಯಾಗಿಲ್ಲ. ಈ ಪರಿಸ್ಥಿತಿಯಲ್ಲಿ ಶಬರಿಮಲೆಗೆ ಭಕ್ತರಿಗೆ ಪ್ರವೇಶ ಕಲ್ಪಿಸುವ ಸರಕಾರದ ತೀರ್ಮಾನ ಸರಿಯಾದ ತೀರ್ಮಾನವಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಶಬರಿಮಲೆ ವಿಷಯ ಚರ್ಚಿಸಲು ಕೇರಳ ಮುಜರಾಯಿ ಸಚಿವ ಕಡಕಂಪ್ಪಳ್ಳಿ ಸುರೇಂದ್ರನ್ ಕಚೇರಿಯಲ್ಲಿ ವಿಶೇಷ ಸಭೆ ನಡೆಯಲಿದೆ. ಸಭೆಯಲ್ಲಿ ತಂತರಿ ಮಹೇಶ್ ಮೋಹನರರ್, ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಭಾಗವಹಿಸಲಿದ್ದಾರೆ. ಆದ್ದರಿಂದ ಶಬರಿಮಲೆ ದರ್ಶನಕ್ಕೆ ಆನ್ಲೈನ್ ಕ್ಯೂ ಬುಕ್ಕಿಂಗ್ ಆರಂಭಗೊಂಡಿಲ್ಲ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












