ಸನ್ಮಾರ್ಗ ವಾರ್ತೆ
ರಜೌರಿ,ಜೂ.11: ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಸೇನೆ ಶೆಲ್ ದಾಳಿ ಮಾಡಿದ್ದು ಭಾರತದ ಸೈನಿಕರೊಬ್ಬರು ವೀರಮೃತ್ಯುವನ್ನಪ್ಪಿದರು. ಶೆಲ್ ದಾಳಿಯಲ್ಲಿ ಸೈನಿಕ ಗಂಭೀರ ಗಾಯಗೊಂಡಿದ್ದರು. ರಜೌರಿ, ಪೂಂಛ್ ಜಿಲ್ಲೆಗಳನ್ನೊಳಗೊಂಡ ತರ್ಕುಂದ್ ಸೆಕ್ಟರಿನ ಗಡಿಯಲ್ಲಿ ಪಾಕಿಸ್ತಾನದ ಸೇನೆ ಪ್ರಚೋದನೆಯಿಲ್ಲದೆ ಶೆಲ್ ದಾಳಿ ಮಾಡಿದೆ. ಇದನ್ನು ವಿರೋಧಿಸಿ ಭಾರತದ ಸೇನೆ ಬಲವಾದ ತಿರುಗೇಟು ನೀಡಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ರಾತ್ರೆ ರಜೌರಿಯಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಸ್ಥಳೀಯ ನಿವಾಸಿಯಾದ ನಯಮತುಲ್ಲ(35) ಎಂಬವರು ಗಾಯಗೊಂಡಿದ್ದರು. ಇವರ ಬಲ ತೋಳಿಗೆ ಶೆಲ್ನಿಂದ ಗಾಯವಾಗಿದೆ. ಬುಧವಾರ ನೌಶೇರ ಸೆಕ್ಟರಿನ ಜನವಾಸ ಸ್ಥಳವನ್ನು ಗುರಿಯಾಗಿಟ್ಟು ಪಾಕಿಸ್ತಾನದ ಸೇನೆ ಗುಂಡು ಹಾರಿಸಿದ್ದು ಹಲವು ಮನೆಗಳಿಗೆ ಹಾನಿಯಾಗಿವೆ.
ಜಮ್ಮು-ಕಾಶ್ಮೀರದ ಬುದ್ಗಾಂವ್ ಜಿಲ್ಲೆಯ ಪಠಾಣ್ಪುರ ಗ್ರಾಮದಲ್ಲಿ ಸುರಕ್ಷಾ ಸೇನೆ ಮತ್ತು ಭಯೋತ್ಪಾದಕರ ನಡುವೆ ಘರ್ಷಣೆ ನಡೆದಿದ್ದು, ಗುಪ್ತಚರ ಮಾಹಿತಿಯ ಆಧಾರದಲ್ಲಿ ಭಯೋತ್ಪಾದಕರಿರುವ ಸ್ಥಳವನ್ನು ಸೈನಿಕರು ಸುತ್ತುವರಿದು ತಪಾಸಣೆ ಆರಂಭಿಸಿದ್ದಾರೆ. ಎರಡು ಕಡೆಯಿಂದ ನಡುವೆ ಗುಂಡುಹಾರಾಟ ಮುಂದುವರಿಯುತ್ತಿದೆ ಎಂದು ವರದಿಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮುಲಕ ನಮ್ಮನ್ನು ಬೆಂಬಲಿಸಿ.












