ಸನ್ಮಾರ್ಗ ವಾರ್ತೆ
ಕುರ್ಆನ್ ಮಾನವ ಕುಲಕ್ಕೆ ದೇವನ ಅತೀ ದೊಡ್ಡ ಅನುಗ್ರಹವಾಗಿದೆ.ಅದು ಮನಸ್ಸಿನ ಕಾಯಿಲೆಗಳಿಗೆ ಗುಣೌಷಧವಾಗಿದೆ. ಜನರು ಶೇಖರಿಸುತ್ತಿರುವ ವಸ್ತುಗಳ ಪೈಕಿ ಅತೀ ದೊಡ್ಡ ಅನುಗ್ರಹ ಇದಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್ ತಿಳಿಸಿದರು. ಅವರು ಇಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಹಮ್ಮಿಕೊಂಡಿದ್ದ ಆನ್ಲೈನ್ ಕುರ್ಆನ್ ಅಧ್ಯಯನದ ಉದ್ಘಾಟನೆ ನಡೆಸಿ ಮಾತನಾಡುತ್ತಿದ್ದರು.
ಮನುಷ್ಯ ಜೀವನ ಎರಡು ಭಾಗಗಳು ಭೌತಿಕ ಜೀವನ ಮತ್ತು ಅಧ್ಯಾತ್ಮಿಕ ಜೀವನ. ಗತಕಾಲಕ್ಕೆ ಹೋಲಿಸಿದರೆ ಮನುಷ್ಯ ಬಹಳಷ್ಟು ಭೌತಿಕ ಪ್ರಗತಿ ಸಾಧಿಸಿದ್ದಾನೆ. ಆದರೆ ಅಧ್ಯಾತ್ಮಿಕ ಜೀವನದ ಹೊರತು ಜೀವನ ಪರಿಪೂರ್ಣವಲ್ಲ. ಇಂದಿನ ಸಂದಿಗ್ಧ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಕುರ್ಆನ್ ನಮಗೆ ಬೆಳಕಾಗಿ ಮಾರ್ಗದರ್ಶನ ನೀಡುತ್ತದೆ. ಕುರ್ಆನ್ ಕೇವಲ ಪುಣ್ಯಗಳಿಸುವ, ರೋಗ ಶಮನಕ್ಕಿರುವ ಗ್ರಂಥವಲ್ಲ. ಬದಲಾಗಿ ಅದನ್ನು ಅರ್ಥೈಸಿ ಜೀವನದಲ್ಲಿ ಅಳವಡಿಸಿ ಪಾಲಿಸುವುದು ಜೀವನದ ಯಶಸ್ಸಿಗೆ ಅದು ಹೇತುವಾಗಿದೆ. ಕುರ್ಆನಿನ ಮುಖ್ಯ ಉದ್ದೇಶ ಜನರನ್ನು ನ್ಯಾಯದೆಡೆಗೆ ಆಹ್ವಾನಿಸುವುದು ಮತ್ತು ನ್ಯಾಯದ ಪ್ರತಿಷ್ಠಾಪನೆಯಾಗಿದೆ ಎಂದು ಅವರು ತಿಳಿಸಿದರು.
ಬಿ.ಎಸ್.ಶರ್ಫುದ್ದೀನ್ ಪ್ರಾಸ್ತಾವನೆಗೈದರು. ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಕುರ್ಆನ್ ಅಧ್ಯಯನ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಯೂಸುಫ್ ಕನ್ನಿ ಮತ್ತು ಅಕ್ಬರ್ ಅಲಿ ಉಡುಪಿ ಸಂದರ್ಭೋಚಿತವಾಗಿ ಮಾತನಾಡಿದರು. ಅಬ್ದುಸ್ಸಲಾಮ್ ಯು ಸ್ವಾಗತಿಸಿದರು.ಡಾ.ಮುಬೀನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












