ಸನ್ಮಾರ್ಗ ವಾರ್ತೆ
ಬೀದರ್,ಜೂ.20: 2020 ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಬೀದರ್ ನಗರದಲ್ಲಿ ಬೃಹತ್ ಜನ ಜಾಗೃತಿ ರ್ಯಾಲಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣದಲ್ಲಿ ಬೀದರ್ ಜಿ.ಪಂ. ಸಿಇಓ ಗ್ಯಾನೇಂದ್ರ ಕುಮಾರ್ ಗಂಗವಾರ ರವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಮಳೆಗಾಲ ಪ್ರಾರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುತ್ತದೆ. ನಾಗರಿಕರು ಮಲೇರಿಯಾ ರೋಗವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮತ್ತು ಸೊಳ್ಳೆ ಕಡಿತದಿಂದ ರಕ್ಷಣೆ, ಸೊಳ್ಳೆ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಂಡು ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ರ್ಯಾಲಿಯಲ್ಲಿ ನೇತೃತ್ವವನ್ನು ಜಿಲ್ಲಾ ಮಲೇರಿಯ ಅಧಿಕಾರಿಗಳಾದ ಡಾ. ಅನೀಲ್ ಕುಮಾರ್ ಚಿಂತಾಮಣಿ ವಹಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿ.ಜಿ.ರೆಡ್ಡಿಯವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಮಲೇರಿಯಾ ರೋಗವು ಇಳಿಮುಖವಾಗಿದ್ದು, ಕಳೆದ ಸಾಲಿನಲ್ಲಿ ಕೇವಲ 16 ಮಲೇರಿಯಾ ಪ್ರಕರಣಗಳು ಪತ್ತೆಯಾಗಿತ್ತು. ಅದರಲ್ಲಿ ಹೊರರಾಜ್ಯಗಳಿಂದ 12 ಜನ ವಲಸಿಗರಿಗೆ ಮಲೇರಿಯಾ ಪತ್ತೆಯಾಗಿದ್ದು, ಉಳಿದ ಕೇವಲ 4 ಮಲೇರಿಯಾ ಪ್ರಕರಣಗಳು ಮಾತ್ರ ಜಿಲ್ಲೆಯಲ್ಲಿಯೇ ಧೃಡಪಟ್ಟಿದ್ದವು. ಎಲ್ಲಾ ಮಲೇರಿಯಾ ಪ್ರಕರಣಗಳಿಗೆ ತೀವ್ರ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಲಾಗಿದೆ ಎಂದು ತಿಳಿಸಿದರು.
ಡಾ. ಅನೀಲ್ ಚಿಂತಾಮಣಿಯವರು ಮಾತನಾಡುತ್ತಾ, ಮಲೇರಿಯಾ ರೋಗ ಹರಡದಂತೆ ಎಲ್ಲಾ ಸೂಕ್ತ ಮುಂಜಾಗ್ರತಾ ಕ್ರಮಗಳಾದ ಡಿಡಿಟಿ ಸಿಂಪರಣೆ, ಜ್ವರ ಪೀಡಿತರ ಸಮೀಕ್ಷೆ, ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಕಾರ್ಯ ಕೈಗೊಳ್ಳಲಾಗಿದೆ. ಸೊಳ್ಳೆಗಳ ಉತ್ಪತಿಯ ಬಗ್ಗೆ ಹಾಗೂ ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ವೈಜ್ಞಾನಿಕ ಸ್ವರೂಪ ತಿಳಿಸಿದರು.
ರ್ಯಾಲಿಯಲ್ಲಿ ಡಾ. ರವೀಂದ್ರ ಸಿರಸಗೆ, ಡಾ. ಕೃಷ್ಣಾರೆಡ್ಡಿ, ಡಾ. ಇಂದುಮತಿ ಪಾಟೀಲ್, ಡಾ. ರಾಜಶೇಖರ್ ಪಾಟೀಲ್, ಸಂಗಪ್ಪಾ ಕಾಂಬ್ಳೆ ರಾಜು ಕುಲಕರ್ಣಿ, ಕಮಲಾಕರ ಹಲಗೆ, ಅರುಣಕುಮಾರ, ಬಾಬು ಪ್ರೀಯಾ, ದೇವಿದಾಸ , ಮಹೆಬೂಬಗ ಮಿಯ್ಯಾ, ಮುಹಮ್ಮದ್ ರಫೀವುದ್ದಿನ್, ಸಂಗಶಟ್ಟಿ ಬೀರಾದರ್, ಲಯೀಕುದ್ದೀನ್, ವೀರಶೆಟ್ಟಿ, ಗೋರಖನಾಥ್, ಜಾವೇದ್ ಕಲ್ಯಾಣಕರ್, ದೇವಿದಾಸ, ಬಸವರಾಜ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ರ್ಯಾಲಿಯು ನಗರದ ಜನವಾಡಾ ರಸ್ತೆ, ಅಂಬೇಡ್ಕರ ವೃತ್ತ, ಗವಾನ್ ಚೌಕ್, ಚೌಬಾರಾ, ಮಂಗಲಪೇಟ್, ಅಬ್ದುಲ್ ಪೈಜ್ ದರ್ಗಾ, ಲಾಡಗೇರಿ, ಕುಂಬಾರವಾಡ್, ಸಿದ್ಧಾರೂಢ ಮಠ, ಮೈಲೂರು, ಚಿದ್ರಿ, ಆದರ್ಶ ಕಾಲೋನಿ, ನೌಬಾದ ಹೊಸ ಬಸ್ ನಿಲ್ದಾಣ ಮಾರ್ಗದ ಮುಖಾಂತರ ಹಾಯ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಕೊನೆಗೊಂಡಿತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












