ಸನ್ಮಾರ್ಗ ವಾರ್ತೆ
ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲಿನ ದೌರ್ಜನ್ಯದ ಬಗ್ಗೆ ಅರ್ಧ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿರುವ ರಿಲಿಜಿಯಸ್ ಲಿಬರ್ಟಿ ಕಮಿಷನ್ ಆಫ್ ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ (EFIRLC) 2020 ರ ಮೊದಲ ಆರು ತಿಂಗಳುಗಳಲ್ಲಿ 135 ಪ್ರಕರಣಗಳು ವರದಿಯಾಗಿದ್ದು; ಇವುಗಳಲ್ಲಿ ಗುಂಪು ಹತ್ಯೆ, ಸಮುದಾಯ ಬಹಿಷ್ಕಾರ, ಆರಾಧನೆಗೆ ಅಡ್ಡಿಪಡಿಸುವಿಕೆ ಮತ್ತು ಗೋಸ್ಪೆಲ್ ಸುವಾರ್ತೆ ಹಂಚಿಕೆಯನ್ನು ನಿಲ್ಲಿಸುವ ಸಂಘಟಿತ ಪ್ರಯತ್ನಗಳು ನಡೆದಿವೆ ಎಂದು ವರದಿ ಮಾಡಿದೆ.
ಉದ್ದೇಶಿತ ಮತ್ತು ಕೋಮು ಹಿಂಸಾಚಾರದ ವಿರುದ್ಧ ಕೇಂದ್ರ ಸರಕಾರವು ಸಮಗ್ರ ರಾಷ್ಟ್ರೀಯ ಶಾಸನವನ್ನು ಜಾರಿಗೊಳಿಸಬೇಕು ಮತ್ತು ಕಾನೂನಿನ ನಿಯಮವನ್ನು ಜಾರಿಗೊಳಿಸಬೇಕೆಂದೂ, ಪಂಥೀಯ ದ್ವೇಷ, ಹಿಂಸಾಚಾರವನ್ನು ಉತ್ತೇಜಿಸುವ ಗುಂಪುಗಳ ಸದಸ್ಯರನ್ನು ಬಂಧಿಸಬೇಕು,ಮಿಷನರಿಗಳು ಮತ್ತು ಕ್ರಿಶ್ಚಿಯನ್ ಪುರೋಹಿತರ ಮೇಲೆ ಮತಾಂತರದ ಸುಳ್ಳು ಆರೋಪಗಳನ್ನು ಎತ್ತುವ ಪೂರ್ವ-ಯೋಜಿತ ಕಾರ್ಯಕ್ರಮಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ಇವಾಂಜೆಲಿಕಲ್ ಆಯೋಗವು ಒತ್ತಾಯಿಸಿತು.
“ಭಾರತದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ದ್ವೇಷ ಮತ್ತು ಉದ್ದೇಶಿತ ಹಿಂಸಾಚಾರ” ಎಂಬ 33 ಪುಟಗಳ ವರದಿಯು ಸಾಮಾನ್ಯ ಸಮಯದಲ್ಲೂ ಪರಿಸ್ಥಿತಿ ಹದಗೆಟ್ಟಿದೆ, ಒಂದೋ ಪೊಲೀಸರು ಪ್ರಕರಣಗಳನ್ನು ದಾಖಲಿಸಲು ಅಸಹ್ಯ ಪಡುತ್ತಾರೆ, ಒಂದು ವೇಳೆ ಪ್ರಕರಣ ದಾಖಲಾದರೂ ಕೋಮು ಪ್ರೇರಿತ ಅಪರಾಧಗಳು ವರದಿಯಾಗುವುದಿಲ್ಲ, ಅಥವಾ ಈ ಕುರಿತು ಪ್ರಕರಣಗಳೇ ದಾಖಲಾಗುವುದಿಲ್ಲ ಎಂದು ವರದಿಯು ಆಪಾದಿಸಿದೆ.
ಕೊರೋನ ಲಾಕ್ ಡೌನ್ ಅವಧಿಯಲ್ಲಿಯೂ ರಾಜಧಾನಿಯಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರಗಳು ನಡೆಯುತ್ತಿದ್ದು, ಯೋಗಿ ಆದಿತ್ಯನಾಥ್ ಆಡಳಿತವೊರುವ ಉತ್ತರ ಪ್ರದೇಶದಲ್ಲಿ ಕ್ರಿಶ್ಚಿಯನ್ರ ಮೇಲೆ ಅತೀ ಹೆಚ್ಚು ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, 32 ಪ್ರಕರಣಗಳು ನಡೆದಿವೆ. ಅಲ್ಲದೇ ತಮಿಳ್ನಾಡಿನಲ್ಲಿಯೂ ಕ್ರಿಶ್ಚಿಯನ್ನರ ವಿರುದ್ಧ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ ಎಂದು ವರದಿಯು ತಿಳಿಸಿದೆ.
ಜೂನ್ 4 ರಂದು ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಕೆಂಡುಗುಡಾ ಗ್ರಾಮದಲ್ಲಿ, 14 ವರ್ಷದ ಕ್ರಿಶ್ಚಿಯನ್ ಹುಡುಗನನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಯಿತು, ನಂತರ ಜನರ ಗುಂಪೊಂದು ದೇಹವನ್ನು ತುಂಡುಗಳಾಗಿ ಕತ್ತರಿಸಿ ಹಲವಾರು ಸ್ಥಳಗಳಲ್ಲಿ ಹೂಳಿತು. ಎಫ್ಐಆರ್ನಲ್ಲಿ, ಸಂತ್ರಸ್ತ ಮತ್ತು ಆತನ ತಂದೆ ಸೇರಿದಂತೆ ಅವರ ಕುಟುಂಬ ಮೂರು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಂಡಿದೆ ಎಂದು ಪೊಲೀಸರು ಗಮನಿಸಿದ್ದಾರೆ. ಅಂದಿನಿಂದ, ಗ್ರಾಮಸ್ಥರಲ್ಲಿ ಕೆಲವರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಗ್ರಾಮದ ಕ್ರಿಶ್ಚಿಯನ್ನರು ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಧಾರ್ಮಿಕ ಮತಾಂಧರಿಂದ ನಿರಂತರವಾಗಿ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ಪಾದ್ರಿ ಕೋಶಾ ಮೊಸಾಕಿ ಹೇಳಿದರು. “ಈ ವರ್ಷದ ಫೆಬ್ರವರಿಯಲ್ಲಿ ಈತನ ಮೇಲೆ ಹಲ್ಲೆ ನಡೆಸಲಾಯಿತು. ಈ ದಾಳಿಗಳಿಗೆ ಸಂಬಂಧಿಸಿದಂತೆ ನಾನು ಮಲ್ಕಂಗಿರಿ ಪೊಲೀಸ್ ಠಾಣೆಯಲ್ಲಿ 4 ದೂರುಗಳನ್ನು ನೀಡಿದ್ದೇನೆ.” ಎಂದರು.
ತಮಿಳುನಾಡಿನ ಪೊಲೀಸ್ ಠಾಣೆಯಲ್ಲಿ ತಂದೆ ಮತ್ತು ಮಗನ ಕಸ್ಟಡಿಯಲ್ ಸಾವಿನ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ವರದಿಯಲ್ಲಿ ನೀಡಲಾಗಿದೆ.
ಛತ್ತಿಸ್ಗಡದಲ್ಲಿ ರಾಷ್ಟ್ರೀಯ ಲಾಕ್ಡೌನ್ ಜಾರಿಯಲ್ಲಿದ್ದರೂ 2020 ರ ಏಪ್ರಿಲ್ನಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಉದ್ದೇಶಿತ ಹಿಂಸಾಚಾರದ ಆರು ಪ್ರಕರಣಗಳನ್ನು ರಾಜ್ಯವು ಕಂಡಿದೆ.
ಜಾರ್ಖಂಡ್ನಲ್ಲಿಯೂ ಕ್ರಿಶ್ಚಿಯನ್ರ ಮೇಲೆ ದೌರ್ಜನ್ಯಗಳು ನಡೆದಿದ್ದು, ಬಲಿಷ್ಠ ಧರ್ಮಗಳಿಗೆ ಬಲವಂತದ ಮತಾಂತರ, ರೇಶನ್ ನಿರಾಕರಣೆಯಂತಹ ಘಟನೆಗಳು ವರದಿಯಾಗಿದೆ.
ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ನೆಟ್ವರ್ಕ್ ಮತ್ತು ಇತರ ಕ್ರಿಶ್ಚಿಯನ್ ಗುಂಪುಗಳು ದಾಖಲಿಸಿದ ಪ್ರಕರಣಗಳ ಸಂಖ್ಯೆಯು ಕೇವಲ ಸೂಚಕವಾಗಿದ್ದು ನೈಜ ಪ್ರಕರಣಗಳ ಸಂಖ್ಯೆಯು ಇದಕ್ಕಿಂತಲೂ ಅಧಿಕವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಭಯ, ಕಾನೂನು ಸಾಕ್ಷರತೆಯ ಕೊರತೆ ಮತ್ತು ಪ್ರಕರಣಗಳನ್ನು ದಾಖಲಿಸಲು ಪೊಲೀಸರಿಗೆ ಇಷ್ಟವಿಲ್ಲದಿರುವಿಕೆ/ ನಿರಾಕರಿಸುವಿಕೆಯಿಂದಾಗಿ ಹೆಚ್ಚಿನ ಪ್ರಕರಣಗಳು ಬೆಳಕಿಗೆಬಾರದೇ ಉಳಿದಿವೆ ಎಂದು ವರದಿಯು ಹೇಳಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












