244 ಹಾಸಿಗೆಗಳ ಹಾಸ್ಟೆಲ್‌ನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಟ್ಟ ಶಾಹೀನ್ ಶಿಕ್ಷಣ ಸಂಸ್ಥೆ: ವ್ಯಾಪಕ ಪ್ರಶಂಸೆ

0
997

ಸನ್ಮಾರ್ಗ ವಾರ್ತೆ

ಬೀದರ್,ಜು.28: ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಡೆ ಕಾರ್ಯಗಳಿಗೆ ಕೈಜೋಡಿಸಿರುವ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಇರುವ ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಇದೀಗ ಕೋವಿಡ್ ಕೇರ್ ಸೆಂಟರ್‌ಗೆ ತನ್ನ ಹಾಸ್ಟೆಲ್‍ವೊಂದನ್ನು ನೀಡುವ ಮೂಲಕ ಔದಾರ್ಯ ಮೆರೆದಿದೆ.

ಶಹಾಪುರ ಗೇಟ್ ಬಳಿಯ 244 ಹಾಸಿಗೆಗಳ ಸಾಮರ್ಥ್ಯದ ಸಕಲ ಸೌಕರ್ಯಗಳನ್ನು ಹೊಂದಿರುವ ಹಾಸ್ಟೆಲ್ ಅನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಮಂಗಳವಾರ ನಡೆದ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರ ಸಾಮಾಜಿಕ ಕಳಕಳಿಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.

ಗ್ಯಾನೇಂದ್ರಕುಮಾರ ಗಂಗ್ವಾರ್ ಮಾತನಾಡಿ, ಆರಂಭದಿಂದಲೂ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಕೋವಿಡ್ ಸೋಂಕು ತಡೆಗೆ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತ ಬಂದಿದೆ. ಬೀದರ್ ನಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಾಗ ಸಾವಿರ ಜನರ ಗಂಟಲು ದ್ರವ ಮಾದರಿ ಪಡೆಯಲು ನೆರವಾಗಿತ್ತು. ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ಇರುವ ರೋಗಿಗಳ ಮನೆ ಬಾಗಿಲಿಗೆ ಔಷಧಿ ತಲುಪಿಸಿತ್ತು. ಇದೀಗ ಮತ್ತೆ ಕೋವಿಡ್ ಕೇರ್ ಸೆಂಟರ್‌ಗೂ ಹಾಸ್ಟೆಲ್ ಒದಗಿಸಿದೆ. ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.