ಸನ್ಮಾರ್ಗ ವಾರ್ತೆ
ಕೇರಳ, ಆ. 6: ತಂದೆಯ ಕೊಲೆಗೆ ಪ್ರತೀಕಾರ ಮಾಡಲು ಪುತ್ರ 25 ವರ್ಷ ಕಾದಿದ್ದ. ಚೆಂಗಲೂರ್ ಪುಳಿಂಚೋಡ್ ಮಾಂಚೇರಿ ಮನೆಯ ರಾಘವ ಎಂಬವರ ಪುತ್ರ ಸುಧ(54) ಪ್ರತೀಕಾರಕ್ಕೆ ಬಲಿಯಾಗಿದ್ದು ಕೀಡಾಯಿ ರತೀಶ್ ಎಂಬ ಯುವಕ ಸುಧನನ್ನು ಕೊಲೆ ಮಾಡಿದ್ದಾನೆ.
28 ವರ್ಷಗಳ ಹಿಂದೆ ರತೀಶ್ನ ತಂದೆ ರವಿಯನ್ನು ಕಲ್ಲಿನಿಂದ ಜಜ್ಜಿ ಕೊಂದ ಪ್ರಕರಣದ ಆರೋಪಿ ಸುಧ ಆಗಿದ್ದಾನೆ. ಆದರೆ, ಸಾಕ್ಷ್ಯಗಳ ಕೊರತೆಯಿಂದ ಕೋರ್ಟು ಆತನನ್ನು ಖುಲಾಸೆಗೊಳಿಸಿತ್ತು. ತದನಂತರ ಊರಿನಲ್ಲೇ ಇದ್ದ ಸುಧನನ್ನು ಕೊಲ್ಲುವೆ ಎಂದು ರತೀಶ್ ಹಲವು ಬಾರಿ ಊರವರಲ್ಲಿ ಹೇಳಿದ್ದಾನೆ. ಇದನ್ನು ಆತ ಮಾಡಿ ಮುಗಿಸಿದ ವಿಷಯದಲ್ಲಿ ಊರೇ ಬೆಚ್ಚಿಬಿದ್ದಿದೆ.
ಮಂಗಳವಾರ ಸಂಜೆ ಚೆಂಙಲೂರ್ ಡಡತ್ತೂಟ್ಟು ಪಾಡ ಎಂಬಲ್ಲಿನ ಶರಾಬು ಅಂಗಡಿಯಲ್ಲಿ ಕೊಲೆ ನಡೆದಿದೆ. ಶರಾಬು ಖರೀದಿಸಲು ಸಾಲು ನಿಂತಿದ್ದ ಸುಧನನ್ನು ಆಟೋ ರಿಕ್ಷಾದಲ್ಲಿ ಬಂದ ರತೀಶ್ ನಿರಂತರ ಇರಿದಿದ್ದಾನೆ. ಇರಿತಕ್ಕೊಳಗಾದ ಸುಧ ಬಿದ್ದ ಕೂಡಲೇ ರತೀಶ್ ಮತ್ತು ಆತನ ಇಬ್ಬರು ಸಂಗಡಿಗರು ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದರು. ಸುಧನ ಎದೆಯಲ್ಲಿ ಎಂಟು ಇರಿತಗಳಿವೆ. ಕಳೆದ ಮೂರು ವರ್ಷಗಳಿಂದ ಈ ಕೊಲೆಗೆ ರತೀಶ್ ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












