ದಿಲ್ಲಿ ಗಲಭೆ: ಜೀವಂತ ಇದ್ದಾನೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ ಶಹಬಾಝ್‍ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು- ಪೊಲೀಸರು

0
749

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 6: ದಿಲ್ಲಿಯ ಕೋಮು ಗಲಭೆಯಲ್ಲಿ ದುಷ್ಕರ್ಮಿಗಳು ಶಹಬಾಝ್ ಎಂಬ 22 ವರ್ಷದ ಯುವಕನಿಗೆ ಬೆಂಕಿ ಕೊಟ್ಟಿರುವುದು ಆತ ಜೀವಂತವಿದ್ದಾನಾ ಎಂದು ಪರೀಕ್ಷಿಸುವುದಕ್ಕಾಗಿತ್ತು. ಹಲ್ಲೆಗೊಳಗಾಗಿ ಪ್ರಜ್ಞೆ ಕಳಕೊಂಡು ಬಿದ್ದ ಶಹಬಾಝ್‍ ಮೃತಪಟ್ಟಿದ್ದಾನೆಯೇ ಎಂದು ಖಚಿತಪಡಿಸಲಿಕ್ಕಾಗಿ ಬೆಂಕಿ ಕೊಟ್ಟಿರುವುದು ಎಂದು ಪೊಲೀಸರು ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಜೀವ ಇದ್ದ ಶಹಬಾಝ್ ನರಳಿದಾಗ ಕಟ್ಟಿಗೆ ಇಟ್ಟು ಬೆಂಕಿ ಕೊಡಲಾಯಿತು. ಗಲಭೆಯ ಆರೋಪಿ ರಾಹುಲ್ ಶರ್ಮನ (24) ಜಾಮೀನು ಅರ್ಜಿಯನ್ನು ಪರಿಗಣಿಸುವ ವೇಳೆ ಪೊಲೀಸರು ಈ ವರದಿ ನೀಡಿದರು.

ಶಹಬಾಝ್‍ನ ತಲೆಬುರುಡೆ ಮತ್ತು ಕೆಲವು ಎಲುಬುಗಳು ಮಾತ್ರ ಸಿಕ್ಕಿದೆ. ಶಹಬಾಝ್ ಕೊಲೆಯಾಗಿದ್ದು ಎಂದು ಅರಿಯಲು ಡಿಎನ್‍ಎ ಟೆಸ್ಟ್ ಮಾಡಬೇಕಂದು ಪೊಲೀಸರು ತಿಳಿಸಿದರು. ಆರೋಪಿ ರಾಹುಲ್ ಶರ್ಮನ ಜಾಮೀನು ಅರ್ಜಿಯನ್ನು ಬುಧವಾರ ಅಡಿಶನಲ್ ಸೆಷನ್ಸ್ ಜಡ್ಜ್ ತಿರಸ್ಕರಿಸಿದ್ದಾರೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರುವರಿ 25ರಂದು ಬೆಳಗ್ಗೆ ಏಳು ಗಂಟೆಗೆ ಕಣ್ಣಿಗೆ ಹಾಕುವ ಮದ್ದಿಗಾಗಿ ಜಿಟಿಬಿ ಆಸ್ಪತ್ರೆಗೆ ಶಹಬಾಝ್ ಹೊರಟಿದ್ದ. ಮಧ್ಯಾಹ್ನ 2. 25ಕ್ಕೆ ಸಹೋದರ ಮತ್ಲ್ಯೂಬ್ ಅಹ್ಮದ್ ಶಹಭಾಝ್‍ನಿಗೆ ಕರೆ ಮಾಡಿದ್ದರು. ತಾನು ಕರಾವನ್ ನಗರದಲ್ಲಿದ್ದೇನೆ, ಒಳದಾರಿಯಲ್ಲಿ ಮನೆಗೆ ಬರುತ್ತೇನೆ ಎಂದು ಶಹಬಾಝ್ ಹೇಳಿದ್ದಾನೆ. ಆದರೆ ನಂತರ ಶಹಬಾಝ್‍ನನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಫೆ. 27ಕ್ಕೆ ಸುಟ್ಟುಹೋಗಿದ್ದ ಮೃತದೇಹ ಸಿಕ್ಕಿತ್ತು. ಅದು ಶಹಬಾಝ್‍ನದ್ದು ಎಂದು ಮತ್ಲ್ಯೂಬ್‍ಗೆ ಕೆಲವರು ಹೇಳಿದ್ದರು.

ಶಹಬಾಝ್‍ನನ್ನು ದುಷ್ಕರ್ಮಿಗಳು ಹಿಡಿದು ಮುಸ್ಲಿಂ ಎಂದು ಅರಿತೊಡನೆ ನಿರ್ದಯವಾಗಿ ಹೊಡೆದರು ಎಂದು ಪೊಲೀಸರು ಕೋರ್ಟಿನಲ್ಲಿ ಹೇಳಿದ್ದಾರೆ. ಪ್ರಜ್ಞೆ ಕಳಕೊಂಡ ಶಹಬಾಝ್ ಮೃತಪಟ್ಟಿರುವನೋ ಇಲ್ಲವೋ ಎಂದು ಗಲಭೆಕೋರರಿಗೆ ಸಂದೇಹವಾಯಿತು. ನಂತರ ಒಣ ಕಟ್ಟಿಗೆಗಳನ್ನು ತಂದು ಶಹಬಾಝನ ಮುಖಕ್ಕೆ ಪೆಟ್ರೋಲ್ ಹಾಕಿ ಸುರಿದು ಸುಟ್ಟುಹಾಕಿದ್ದಾರೆ ಎಂದು ಪೊಲೀಸರ ವರದಿ ತಿಳಿಸಿದೆ.

ಘಟನೆಯಲ್ಲಿ ರಾಹುಲ್ ಶರ್ಮ, ಅಮನ್, ಮೋಹಿತ್ ನನ್ನು ಸಾಕ್ಷಿಗಳು ಗುರುತಿಸಿದ್ದಾರೆ. ಮುಸ್ಲಿಂ ಧರ್ಮದವರ ಜೀವ, ಸೊತ್ತು ನಾಶಪಡಿಸುವ ಗುರಿಯಲ್ಲಿ ಗೆಳೆಯರ ಜೊತೆ ಸಂಚು ನಡೆಸಿದ್ದೇವೆ ಎಂದು ಅಮನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಹಬಾಝ್‍ನಿಗೆ ಹೊಡೆದು ಹಣ ದೋಚಿ ಜೀವಂತ ಸುಟ್ಟುಹಾಕಿದ್ದನ್ನು ಅಮನ್‍ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.