ಉದ್ಧವ್ ಠಾಕ್ರೆ ವಿರುದ್ಧ ಕಾರ್ಟೂನ್: ನಿವೃತ್ತ ನೌಕಾಸೇನಾ ಅಧಿಕಾರಿಗೆ ಹಲ್ಲೆ

0
688

ಸನ್ಮಾರ್ಗ ವಾರ್ತೆ

ಮುಂಬೈ,ಸೆ.12:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಟೀಕಿಸುವ ಕಾರ್ಟೂನ್ ಪೋಸ್ಟ್ ಮಾಡಿದ ನಿವೃತ್ತ ನೌಕಾಸೇನೆಯ ಅಧಿಕಾರಿಗೆ ಶಿವಸೇನೆ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ಮಾಡಿದ್ದು, 65 ವರ್ಷದ ಮದನ್ ಶರ್ಮ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.

ಕಾಂದಿವಲಿಯ ಅವರ ವಾಸಸ್ಥಳಕ್ಕೆ ಬಂದು ಶಿವಸೇನೆಯ ಕಾರ್ಯಕರ್ತರು ದುಷ್ಕೃತ್ಯವೆಸಗಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಸೇನೆಯ ಶಾಖಾ ಪ್ರಮುಖ್ ಕಮೇಶ್ ಶರ್ಮ ಬಂಧಿತರಲ್ಲಿ ಸೇರಿದ್ದಾರೆ.ತಲೆತಪ್ಪಿಸಿಕೊಂಡಿರುವ ಇಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಉದ್ಧವ್ ಠಾಕ್ರೆಯ ಒಂದು ಕಾರ್ಟೂನ್ ರೆಸಿಡೆನ್ಶಿಯಲ್ ಸೊಸೈಟಿ ವಾಟ್ಸಪ್ ಗ್ರೂಪ್‍ಗೆ ಮದನ್ ಶರ್ಮ ಪೋಸ್ಟ್ ಮಾಡಿದ್ದರು. ನಂತರ ಕಮಲೇಶ್ ಶರ್ಮರಿಗೆ ಕರೆ ಮಾಡಿ ಅವರಿರುವ ಜಾಗ, ವಿಳಾಸವನ್ನು ಕೇಳೀ ತಿಳಿದು ಕೊಂಡ ಶಿವಸೇನೆ ಕಾರ್ಯಕರ್ತರ ತಂಡ ಕಾಂದಿವಲಿಯ ಲೋಕಂಡವಾಲ ಕಾಂಪ್ಲೆಕ್ಸ್‌ನಲ್ಲಿ ವಾಸವಿರುವ ಶರ್ಮರ ನಿವಾಸಕ್ಕೆ ಬಂದು ಹೊರಗೆ ಕರೆದು ಹಲ್ಲೆ ಮಾಡಿದೆ. ಶುಕ್ರವಾರ ಬೆಳಗ್ಗೆ 11:30ಕ್ಕೆ ಘಟನೆ ನಡೆದಿದ್ದು ಸಿಸಿಟಿವಿಯ ದೃಶ್ಯಗಳು ವ್ಯಾಪಕವಾಗಿ ಪ್ರಚಾರವಾಗಿದೆ.

ಶರ್ಮರ ಕಣ್ಣಿಗೆ ಗಾಯವಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಶರ್ಮರ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇವೇಳೆ, ಘಟನೆಯನ್ನು ಮುಂದಿಟ್ಟು ಠಾಕ್ರೆ ಸರಕಾರದ ವಿರುದ್ಧ ಬಿಜೆಪಿ ಕಟು ಟೀಕೆ ಮಾಡಿದೆ. ಉದ್ಧವ್ ಸರಕಾರ ಗೂಂಡಾರಾಜ್ ನಿಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.