ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.1:ಉತ್ತರ ಪ್ರದೇಶದ ಹತ್ರಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 19 ವರ್ಷದ ದಲಿತ ಬಾಲಕಿಯ ಕುಟುಂಬವನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಂದರ್ಶಿಸಲಿದ್ದಾರೆ ಎಂಬುದಾಗಿ ವರದಿಯಾಗಿತ್ತು.
ಆದರೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿಗೂ ಮುನ್ನವೇ ಉತ್ತರಪ್ರದೇಶದ ಆದಿತ್ಯನಾಥ್ ಸರಕಾರ ಹಥ್ರಾಸ್ ಜಿಲ್ಲೆಯ ಗಡಿಭಾಗಗಳನ್ನು ಮುಚ್ಚಿದ್ದು, ಸೆಕ್ಷನ್ 144ನ್ನು ಜಾರಿಗೊಳಿಸಿದೆ. 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂಬುದಾಗಿ ಆದೇಶಿಸಲಾಗಿದೆ ಎಂಬುದಾಗಿ ವರದಿಯಾಗಿದೆ.
ಬಾಲಕಿಯ ಮೇಲಾದ ದೌರ್ಜನ್ಯವನ್ನು ವಿರೋಧಿಸಿ ಈಗಾಗಲೇ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರಪ್ರದೇಶ ಸರಕಾರದ ಆಳ್ವಿಕೆಯಲ್ಲಿ ನ್ಯಾಯದ ಬದಲಾಗಿ ಅನ್ಯಾಯದ ಆಧಿಪತ್ಯವಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ದಲಿತರನ್ನು ದಮನಿಸಲು ಸಮಾಜದಲ್ಲಿ ಅವರಿಗಿರುವ ಸ್ಥಾನವನ್ನು ತೋರಿಸಿಕೊಡುವ ಉತ್ತರ ಪ್ರದೇಶ ಸರಕಾರದ ಕ್ರಮ ನಾಚಿಕೆಗೇಡಿನದ್ದು, ಇಂತಹ ದ್ವೇಷಪೂರಿತ ಚಿಂತನೆಗಳ ವಿರುದ್ಧ ನಾವು ಹೋರಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಂಗಳವಾರ ದಿಲ್ಲಿಯ ಆಸ್ಪತ್ರೆಯಲ್ಲಿ ಅತ್ಯಾಚಾರ ಸಂತ್ರಸ್ತೆ ಮೃತಪಟ್ಟಿದ್ದು, ಕುಟುಂಬದವರ ಪ್ರತಿಭಟನೆಯ ನಡುವೆಯೇ ಯುಪಿ ಪೊಲೀಸರು ಮಧ್ಯ ರಾತ್ರೆಯಲ್ಲಿ ಮೃತದೇಹದ ಸಂಸ್ಕರಣೆ ನಡೆಸಿದ್ದು ಬೆಳಕಿಗೆ ಬಂದಿದ್ದರಿಂದ ಪ್ರತಿಭಟನೆಯು ತೀವ್ರಸ್ವರೂಪ ಪಡೆದಿದ್ದವು. ತಂದೆ-ತಾಯಿ ಮೃತದೇಹವನ್ನು ಮನೆಗೆ ಕೊಂಡು ಹೋಗಲು ಬೇಡಿಕೆಯಿಟ್ಟರೂ ಪೊಲೀಸರು ನಿರಾಕರಿಸಿ ಬಲವಂತದಿಂದ ಶವಸಂಸ್ಕಾರ ನಡೆಸಿದರೆಂದು ಸಂತ್ರಸ್ತ ಯುವತಿಯ ಕುಟುಂಬ ಆರೋಪಿಸಿತ್ತು.












