ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳ: ಏಷ್ಯಾದಲ್ಲೇ ಅತೀ ಹೆಚ್ಚು ಲೈಂಗಿಕ ಕಾರ್ಯಕರ್ತರು ಜೀವಿಸುತ್ತಿರುವ ಕೆಂಪು ಬೀದಿಗಳಿರುವ ಪಶ್ಚಿಮ ಬಂಗಾಳದ ಸೋನಾಗಚಿಯಲ್ಲಿ ಕೊರೋನಾ ಕಾಲದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಂದ 80%ರಷ್ಟು ಮಂದಿ ಲೈಂಗಿಕ ಕಾರ್ಯಕರ್ತರು ಇತರೆ ವೃತ್ತಿ ಅರಸಿ ತೆರಳಿದ್ದಾರೆ. ಕೊರೋನಾ ಮತ್ತು ಲಾಕ್ಡೌನ್ ದುರಂತದ ನಡುವೆ ತಮ್ಮ ವೃತ್ತಿಯಲ್ಲಿ ತೊಡಗಿಸಿಗೊಳ್ಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಇತರೆ ವೃತ್ತಿಯ ಕಡೆಗೆ ಅವರು ಮುಖಮಾಡಿದ್ದಾರೆ.
ಲೈಂಗಿಕ ವೃತ್ತಿ ತ್ಯಜಿಸಿ ಇತರೆ ಉದ್ಯೋಗದ ಕಡೆಗೆ ಕಾಲಿಟ್ಟಿರುವುದು ಆಶಾದಾಯಕ ಬೆಳವಣಿಗೆ ಎಂದು ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ಕೇಳಿಬರುತ್ತಿದೆ.
ಕೋವಿಡ್ ವ್ಯಾಪಿಸುತ್ತಿದ್ದಂತೆ, ಲಾಕ್ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ತಮ್ಮ ದಿನನಿತ್ಯದ ಖರ್ಚಿಗೂ ಸಾಲ ಮಾಡಿಕೊಳ್ಳುವ ಮಟ್ಟಕ್ಕೆ ಲೈಂಗಿಕ ಕಾರ್ಯಕರ್ತರ ಬದುಕು ಅಂತಂತ್ರವಾಗಿದೆ. ಹಸಿವು ತಾಂಡವಾಡುತ್ತಿರುವ ಸೋನಾಗಚಿ ಕೆಂಪು ಬೀದಿಯ ಮಹಿಳೆಯರು ಇದೀಗ ಬೇರೆ ಉದ್ಯೋಗ ಹುಡುಕಿ ನಗರ ಬಿಡುತ್ತಿದ್ದಾರೆ.
ಮನುಷ್ಯರ ಕಳ್ಳ ಸಾಗಾಣಿಕೆಯ ವಿರುದ್ಧ ಕಾರ್ಯನಿರ್ವಹಿಸುವ ಸಂಘಟನೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಹೊರಬಂದಿದೆ. ಸಮೀಕ್ಷೆಯ ಪ್ರಕಾರ ಸುಮಾರು 7000 ದಷ್ಟು ಜನರು ಸೋನಾಗಚಿಯಲ್ಲಿ ಲೈಂಗಿಕ ವೃತ್ತಿ ನಿರ್ವಹಿಸುತ್ತಿದ್ದಾರೆ.
ಲಾಕ್ಡೌನ್ ನಿಯಂತ್ರಣ ಸಡಿಲಗೊಂಡ ಬಳಿಕ 65% ದಷ್ಟು ಉದ್ಯೋಗಳು ಪುನರಾರಂಭಗೊಂಡಿದೆ. ಆದರೆ ಕೊರೋನಾ ಹರಡುವ ಭೀತಿಯಿಂದ ಲೈಂಗಿಕ ವೃತ್ತಿಯೊಂದಿಗೆ ಮುಂದುವರಿಯಲು ಇವರು ಇಚ್ಚಿಸುವುದಿಲ್ಲ. ಈ ವಿಚಾರದಲ್ಲಿ ಈ ತನಕ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಲೈಂಗಿಕ ಕಾರ್ಯಕರ್ತರಿಗೆ ಸರಕಾರ ಎಲ್ಲಾ ರೀತಿಯ ಸಹಾಯ ಮಾಡಲು ಸಜ್ಜಾಗಿದೆಯೆಂದೂ, ಈ ತನಕ ಈ ವಿಚಾರ ಸರಕಾರದ ಗಮನಕ್ಕೆ ಬಂದಿರಲಿಲ್ಲ ಎಂದು ರಾಜ್ಯ ಮಹಿಳಾ-ಮಕ್ಕಳ ಕಲ್ಯಾಣ ಸಚಿವೆ ಶಶಿ ಪಂಜಾ ತಿಳಿಸಿದ್ದಾರೆ. ಸರಕಾರ ಉಚಿತ ರೇಷನ್ ನೀಡುತ್ತಿರುವುದರಿಂದ ಅವರಿಗೆ ಹಸಿವಿನಿಂದಿರುವ ಸನ್ನಿವೇಶ ಎದುರಾಗುವುದಿಲ್ಲ ಎಂದೂ ಅವರು ಹೇಳಿದರು.
ಆದರೆ, ಸರಕಾರದ ಸಹಾಯ ಅಸಮರ್ಪಕವೆಂದೂ ಸ್ವಯಂಪ್ರೇರಿತ ಸಂಸ್ಥೆಗಳ ನೇತೃತ್ವದಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಅಗತ್ಯವಾದ ಸಹಾಯ ನೀಡುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂಬುದು ಅವರ ಬೇಡಿಕೆ.












