ನ್ಯೂಝಿಲೆಂಡ್| ಜೆಸಿಂತಾ ಆರ್ಡನ್ ಸರಕಾರದಲ್ಲಿ ಸಚಿವೆಯಾಗಿ ಭಾರತೀಯ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್

0
605

ಸನ್ಮಾರ್ಗ ವಾರ್ತೆ

ವೆಲ್ಲಿಗ್ಟನ್,ನ.2: ನ್ಯೂಝಿಲೆಂಡಿನ ಜೆಸಿಂತಾ ಆರ್ಡನ್ ಸರಕಾರದಲ್ಲಿ ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಸಚಿವೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಯುವಜನ ಕಲ್ಯಾಣ, ಸಾಮಾಜಿಕ ಅಭಿವೃದ್ಧಿ, ಸ್ವಯಂಸೇವಾ ಕ್ಷೇತ್ರ ಇತ್ಯಾದಿ ಖಾತೆಗಳ ಹೊಣೆಗಾರಿಕೆಯನ್ನು ಇವರು ವಹಿಸಿಕೊಂಡಿದ್ದಾರೆ‌ ಮೂಲತಃ ಅವರು ಕೇರಳದ ಎರ್ನಾಕುಲಂನವರು.
ಪ್ರಿಯಾಂಕಾ ಎರಡನೇ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ಕಾರ್ಮಿಕ ಸಹಸಚಿವೆಯ ಹೊಣೆಯೂ ಅವರ ತಲೆ ಮೇಲಿದೆ. ನ್ಯೂಝಿಲೆಂಡಿನಲ್ಲಿ ಮೊದಲ ಭಾರತ ಮೂಲದ ಸಚಿವೆಯಾಗಿ ಪ್ರಿಯಾಂಕ ಅಧಿಕಾರಕ್ಕೆ ಬಂದಿದ್ದಾರೆ. ಅವರ ಬಾಲ್ಯ ಸಿಂಗಾಪುರದಲ್ಲಾಗಿತ್ತು. ನಂತರ ನ್ಯೂಝಿಲೆಂಡಿಗೆ ಬಂದು ಸಾಮಾಜಿಕ ಕಾರ್ಯಗಳಲ್ಲಿ ವ್ಯಸ್ತರಾದರು. ಪ್ರಿಯಾಂಕ 2006ರಲ್ಲಿ ಲೇಬರ್ ರ್ಪಾರ್ಟಿಗೆ ಸೇರಿದರು. 2017ರಲ್ಲಿ ಸಂಸದೆಯಾದರು. 2019ರಲ್ಲಿ ಪಾರ್ಲಿಮೆಂಟ್ ಪ್ರೈವೇಟ್ ಕಾರ್ಯದರ್ಶಿಯಾದರು. ಕಳೆದ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಸಚಿವೆಯಾದರು.

ನ್ಯೂಝಿಲೆಂಡಿಗೆ ಎರಡನೆ ಬಾರಿ ಜೆಸಿಂತಾ ಪ್ರಧಾನಿಯಾಗಿದ್ದು ಅವರ ಸಂಪುಟದಲ್ಲಿ ಸಾಕಷ್ಟು ಮಹಿಳೆಯರಿಗೂ ಜಾಗ ಸಿಕ್ಕಿದೆ. ಶೇ.49 ಮತಗಳಿಂದ 120 ಸಂಸತ್ ಸ್ಥಾನಗಳಲ್ಲಿ 64 ಸ್ಥಾನಗಳನ್ನು ಜೆಸಿಂತಾರ ಲೇಬರ್ ಪಾರ್ಟಿ ಗೆದ್ದಿದೆ. ಸಮೀಪ ಪ್ರತಿಸ್ಪರ್ಧಿ ನ್ಯಾಶನಲ್ ಪಾರ್ಟಿಗೆ ಶೇ.27 ಮತಗಳು ಬಿದ್ದಿದ್ದು 34 ಸ್ಥಾನಗಳಿಸಲಷ್ಟೇ ಅದಕ್ಕೆ ಸಾಧ್ಯವಾಗಿದೆ.