ಹರ್ಯಾಣದಲ್ಲಿ ದಿಲ್ಲಿ ಚಲೋ ರ‌್ಯಾಲಿ: ಯೋಗೇಂದ್ರ ಯಾದವ್ ಬಂಧನ

0
518

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.26: ಕೇಂದ್ರ ಸರಕಾರದ ನೂತನ ಕೃಷಿ ಕಾನೂನಿನ ವಿರುದ್ಧ ನಡೆಯುತ್ತಿರುವ ರೈತರ ದಿಲ್ಲಿ ಚಲೋ ರ್ಯಾಲಿ ಉದ್ವಿಗ್ನಗೊಂಡಿದೆ. ದಿಲ್ಲಿಗೆ ಪಂಜಾಬ್‍ನಿಂದ ಹೊರಟ ಸಾವಿರಾರು ರೈತರನ್ನು ಹರಿಯಾಣ ಗಡಿಯಲ್ಲಿ ತಡೆದುದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರೈತರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿದ್ದಾರೆ. ಕೋಪಗೊಂಡ ರೈತರು ಪೊಲೀಸರು ಇರಿಸಿದ್ದ ಬ್ಯಾರಿಕೇಡ್‍ಗಳನ್ನು ನದಿಗೆ ಎಸೆದಿದ್ದಾರೆ. ನಂತರ ಪೊಲೀಸರ ಪ್ರತಿಬಂಧವನ್ನು ಬೇಧಿಸಿ ಹರಿಯಾಣಕ್ಕೆ ಪ್ರವೇಶಿಸಿದ್ದಾರೆ.

ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಸ್ವರಾಜ್ ಅಭಿಯಾನ ಪಾರ್ಟಿ ನಾಯಕ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‍ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗುರುಗ್ರಾಮದಲ್ಲಿ ಅವರನ್ನು ಪೊಲೀಸರು ಕಸ್ಟಡಿಗೆ ಪಡೆಕೊಂಡಿದ್ದು, ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಿದ ರೈತರ ಜೊತೆ ಯಾದವ್‍ರನ್ನು ಪೊಲೀಸರು ಬಂಧಿಸಿದರು. ಮೊಕಲ್‍ವಾಸ್ ಗ್ರಾಮದ ಒಂದು ಶಾಲೆಯಲ್ಲಿ ಇವರನ್ನು ಇರಿಸಲಾಗಿದೆ.

ಕೊರೋನ ನಿಯಂತ್ರಣದ ಹೆಸರಿನಲ್ಲಿ ಪೊಲೀಸರು ರೈತರ ರ್ಯಾಲಿಯನ್ನು ತಡೆದಿದ್ದು ಖಂಡಿಸಿ ಟ್ವೀಟ್ ಮಾಡಿದ ಯಾದವ್ “ಕಳೆದ ದಿವಸ ಹರಿಯಾಣದ ಉಪಮುಖ್ಯಮಂತ್ರಿ ಸಾಮಾಜಿಕ ಅಂತರ ಪಾಲಿಸದೆ ಮಾಸ್ಕ್ ಧರಿಸದೆ ರ್ಯಾಲಿ ಮಾಡಿದ್ದರು. ಕೊರೋನ ನಿಬಂಧನೆ ಅವರಿಗೆ ಅನ್ವಯವಾಗಿರಲಿಲ್ಲವೇ? ಬಿಹಾರದ ಚುನಾವಣೆಯಲ್ಲಿ ಕೊರೋನ ನಿಬಂಧನೆಗಳು ಪಾಲಿಸಲ್ಪಟ್ಟಿಲ್ಲ. ರೈತರು ಹೋರಾಟಕ್ಕೆ ಮಾತ್ರ ಯಾಕೆ ನಿಯಂತ್ರಣವಿದೆ” ಎಂದು ಅವರು ಪ್ರಶ್ನಿಸಿದರು. ತಮ್ಮನ್ನು ಶಾಲೆಯಲ್ಲಿ ಕೂಡಿ ಹಾಕಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಹಿಂದೆ ರೈತ ಹೋರಾಟದಲ್ಲಿ ಭಾಗವಹಿಸಿದ ಕಿಸಾನ್‌ಸಭಾ ನಾಯಕ ಪಿ.ಕೃಷ್ಣ ಪ್ರಸಾದ್‍ರನ್ನು ಕೂಡ ಪೊಲೀಸರು ಬಂಧಿಸಿದ್ದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಕ್ರಮ ಜರಗಿಸುತ್ತಿರುವುದು ಸರಿಯಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.