ಸನ್ಮಾರ್ಗ ವಾರ್ತೆ
ಲಕ್ನೋ(ಉತ್ತರ ಪ್ರದೇಶ): ಸೋಷಿಯಲ್ ಮೀಡಿಯಾದಲ್ಲಿ ವಾರದ ಹಿಂದೆ ವೈರಲಾಗಿದ್ದ ರಸ್ತೆ ಬದಿ ನಾಯಿಯ ಜೊತೆಯಲ್ಲಿ ಮಲಗಿದ್ದ ಬಾಲಕನ ಫೋಟೋದ ಹಿಂದೆ ಬಿದ್ದಿದ್ದ ಪೊಲೀಸರು, ಕೊನೆಗೂ ಆತನ ಸಂಪೂರ್ಣ ಗುರುತು ಪತ್ತೆ ಹಚ್ಚಿದ್ದು, ಸದ್ಯಕ್ಕೆ ಬಾಲಕನನ್ನು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ.
ಕಳೆದ ವಾರ ಸ್ಥಳೀಯ ಪೋಟೋ ಜರ್ನಲಿಸ್ಟ್ ಒಬ್ಬರು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಾಲಕ ನಾಯಿಯ ಜೊತೆ ಹೊದಿಕೆಯಡಿಯಲ್ಲಿ ಮಲಗಿದ್ದನ್ನು ಕಂಡಾಗ ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲಾಗಿತ್ತು. ಅಲ್ಲದೇ, ಹಲವಾರು ಮಂದಿಯ ಹೃದಯ ಕಲಕಿತ್ತು.
ಯಾವುದೋ ಕೇಸಿನ ಸಂಬಂಧಿಸಿ ಬಾಲಕನ ತಂದೆ ಜೈಲುಪಾಲಾದ ಬಳಿಕ ತಾಯಿ ತನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಬಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ರಸ್ತೆ ಬದಿ ಬೆಲೂನ್ ಮಾರಿ, ಚಾದಂಗಡಿಯಲ್ಲಿಯೂ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಬಾಲಕನ ವಿಷಯ ತಿಳಿದ ಬಳಿಕ ಹಲವು ಕುಟುಂಬಗಳು ದತ್ತು ಪಡೆಯಲು ಮುಂದೆ ಬಂದಿದ್ದಾಗಿ ತಿಳಿದು ಬಂದಿದೆ.
ಸ್ಥಳೀಯವಾಗಿ ಬಾಲಕನನ್ನು ಮೊದಲು ಅಂಕಿತ್ ಎಂದು ಗುರುತಿಸಲಾಗಿತ್ತು. ಆದರೆ ಆತನ ಪೋಟೋ ವೈರಲ್ ಆದ್ದರಿಂದ ಆತನ ಊರು ಮೀರತ್ ಹಾಗೂ ಆತನ ಹೆಸರು ಅದ್ನಾನ್ ಎಂದು ತಿಳಿದು ಬಂತು ಎಂದು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಮುಖ್ಯಾಧಿಕಾರಿ ಮುಹಮ್ಮದ್ ಮುಶ್ಫಕೀನ್ ಮಾಹಿತಿ ನೀಡಿದ್ದಾರೆ.
ಬಾಲಕನ ತಾಯಿಯನ್ನು ಸಂಪರ್ಕ ಮಾಡಲು ಪ್ರಯತ್ನಿಸಿ, ಅವರ ಮನವೊಲಿಸಲಾಗುವುದು. ಅವರು ಸ್ವೀಕರಿಸಿದೇ ಇದ್ದರೆ ಮುಂದಿನ ಕ್ರಮ ಕೈಗೊಂಡು ದತ್ತು ಪಡೆದು ಆತನ ಭವಿಷ್ಯ ರೂಪಿಸಲು ಆಸಕ್ತ ಪಡುವ ಕುಟುಂಬಕ್ಕೆ ಸರಕಾರದ ಕಾನೂನಿನ ಪ್ರಕಾರ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಮೊದಲು ಬಾಲಕನಿಗೆ ಸಹಾಯ ಮಾಡಲು ಯಾರೂ ಮುಂದೆ ಬರದಿದ್ದರೆ ಆತನಿಗೆ ಶಿಕ್ಷಣ ಕೊಡಿಸಲು ಮಾಡರ್ನ್ ಪೊಲೀಸ್ ಶಾಲೆಗೆ ಸೇರಿಸಲು ಅಗತ್ಯವಿರುವ ಕಾರ್ಯ ಮಾಡುವಂತೆ ಮುಝಪ್ಫರ್ ನಗರದ ಸೀನಿಯರ್ ಪೊಲೀಸ್ ಸೂಪರಿಡೆಂಟ್ ಅಭಿಷೇಕ್ ಯಾದವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಮಧ್ಯೆ ಸ್ಥಳೀಯ ಖಾಸಗಿ ಶಾಲೆಯೊಂದು ಪೊಲೀಸರ ವಿನಂತಿಯ ಮೇರೆಗೆ ಆತನಿಗೆ ವಿದ್ಯಾಭ್ಯಾಸ ನೀಡಲು ಒಪ್ಪಿರುವುದಾಗಿ ತಿಳಿದು ಬಂದಿದೆ.












