ಮೋದಿಯ ಪಾದಸೇವಕರನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕಾ?: ಫೇಸ್‍ಬುಕ್‍ಗೆ ಪ್ರಶಾಂತ್ ಭೂಷಣ್

0
750

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರತಿಭಟನೆ ನಡೆಸುತ್ತಿರುವ ರೈತರ ಕಿಸಾನ್ ಏಕ್ತಾ ಮೋರ್ಚಾ ಸಂಘಟನೆಯ ಫೇಸ್ ಬುಕ್ ಪೇಜ್ ಅನ್ನು ತೆರವು ಗೊಳಿಸಿದ್ದಕ್ಕೆ ಫೇಸ್‍ಬುಕ್ ವಿರುದ್ಧ ಕಟು ಟೀಕೆ ಮಾಡಿರುವ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್, ನೀವು(ಫೇಸ್ ಬುಕ್ ಇಂಡಿಯಾ) ಮೋದಿ ಸರಕಾರದ ಪಾದ ಸೇವಕರು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯದ ಅವಶ್ಯಕತೆ ಇದೆಯಾ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಫೇಸ್ ಬುಕ್ ಪುಟವನ್ನು ಫೇಸ್‍ಬುಕ್ ಮುಚ್ಚಿತ್ತು. ಅಲ್ಲದೇ, ಪ್ರತಿಭಟನೆಯ ದೃಶ್ಯಗಳನ್ನು ಫೇಸ್‍ಬುಕ್ ಪುಟದಲ್ಲಿ ಲೈವ್ ಆಗಿ ನೀಡಲಾಗುತ್ತಿದ್ದುದನ್ನು ಫೇಸ್‍ಬುಕ್ ಕಮ್ಯುನಿಟಿಯ ವಿರುದ್ಧ ಎಂದು ಹೇಳಿ ಇನ್ ಸ್ಟಾಗ್ರಾಂ ಪುಟ ವನ್ನು ಕೂಡಾ ಬ್ಲಾಕ್ ಮಾಡಲಾಗಿತ್ತು. ದೊಡ್ಡ ಮಟ್ಟದ ವಿರೋಧ ಹಾಗೂ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಗಂಟೆಗೊಳಗೆ ಮರು ಊರ್ಜಿತಗೊಳಿಸಲಾಗಿತ್ತು.

ಫೇಸ್‍ಬುಕ್ ವಿರುದ್ಧ ಕಿಸಾನ್ ಮೋರ್ಚಾ ಬಲವಾದ ವಿರೋಧ ವ್ಯಕ್ತಪಡಿಸಿತ್ತಲ್ಲದೇ, ಜನರು ಧ್ವನಿ ಎತ್ತಿದಾಗ ಇವರು ಹೀಗೆ ಮಾಡುತ್ತಿದ್ದಾರೆ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವಿಟರ್ ನಲ್ಲಿ ಹೇಳಿದೆ.

ಅವರಿಗೆ ನಮ್ಮನ್ನು ಸೈದ್ಧಾಂತಿಕವಾಗಿ ಸೋಲಿಸಲು ಆಗದಿರುವಾಗ ಇದುವೇ ಅವರಿಗಿರುವ ಏಕೈಕ ದಾರಿ ಎಂದು ಸ್ಕ್ರೀನ್ ಶಾಟ್ ಅನ್ನು ಮೋರ್ಚಾ ಟ್ವಿಟರ್‍ನಲ್ಲಿ ನೀಡಿತ್ತು.

ಮೋದಿ ಸರಕಾರಕ್ಕೆ ಅನುಕೂಲವಾಗುವಂತೆ ಫೇಸ್‍ಬುಕ್ ವರ್ತಿಸುತ್ತಿದೆ ಎಂದು ಬಲವಾದ ಆರೋಪ ಇತ್ತೀಚೆಗಿನ ದಿನಗಳಲ್ಲಿ ಕೇಳಿ ಬಂದಿತ್ತು.

ವಾಲ್‍ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದ್ದು ವಿವಾದಕ್ಕೆ ಕಿಡಿ ಹಚ್ಚಿತ್ತು. ಬಿಜೆಪಿ ನಾಯಕರ ದ್ವೇಷಪೂರಿತ ಭಾಷಣಗಳ ವಿರುದ್ಧ ಫೇಸ್‍ಬುಕ್ ಕಣ್ಣುಮುಚ್ಚಿ ಕುಳಿತಿರುವುದನ್ನು ಸಾಕ್ಷ್ಯ ಸಹಿತ ಲೇಖನದಲ್ಲಿ ಅದು ಪ್ರಕಟಿಸಿತ್ತು. ನಂತರ ವ್ಯಾಪಕ ಆರೋಪಗಳು ಕೇಳಿ ಬಂದಿದ್ದರಿಂದ ಫೇಸ್‍ಬುಕ್ ಇಂಡಿಯಾ ಪಬ್ಲಿಕ್ ಪಾಲಿಸಿ ನಿರ್ದೇಶಕಿ ಅಂಕಿದಾಸ್ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು‌.