ಪಿಎಫ್ಐ ಮುಖಂಡ ಕೆ‌.ಎಂ.ಶರೀಫ್ ನಿಧನ: ಜಮಾಅತೇ ಇಸ್ಲಾಮೀ ಹಿಂದ್ ನಗರಾಧ್ಯಕ್ಷ‌ ಕೆ.ಎಂ.ಅಶ್ರಫ್ ಸಂತಾಪ

0
771

ಸನ್ಮಾರ್ಗ ವಾರ್ತೆ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ) ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಕೆ.ಎಂ. ಶರೀಫ್ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ.ಎಂ.ಅಶ್ರಫ್ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಡಿನ ಯುವಕರಲ್ಲಿ ಸಾಮಾಜಿಕ ಸಾಮುದಾಯಿಕ ಕಳಕಳಿಯನ್ನು ಮೂಡಿಸುವಲ್ಲಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಹರಿಸಿದ್ದರು. ಅಲ್ಪಸಂಖ್ಯಾತ ಸಮುದಾಯಗಳ ಮತ್ತು ದಲಿತ ಸಮುದಾಯದ ಒಗ್ಗಟ್ಟು, ರಾಜಕೀಯ ಅಸ್ತಿತ್ವದ ಬಗ್ಗೆ ತನ್ನದೇ ಪರಿಕಲ್ಪನೆಯನ್ನು ಹೊಂದಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಅವರು ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಯ ಮೂಲಕ ಹಲವಾರು ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಕೊಂಡಿದ್ದರು. ಉತ್ಸಾಹ, ಗಾಂಭೀರ್ಯ ವ್ಯಕ್ತಿತ್ವ, ಮೃದುಮನಸ್ಸಿನವರಾಗಿದ್ದ ಅವರಿಗೆ ಸರ್ವಶಕ್ತನಾದ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅವರ ಕಾರ್ಯಕರ್ತರಿಗೆ ಮತ್ತು ಸಮುದಾಯ ಬಂಧುಗಳಿಗೆ ಅವರ ಅಗಲಿಕೆಯನ್ನು ಸಹಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಅದೇರೀತಿ, ಕೆ.ಎಂ. ಶರೀಫ್ ರವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ , ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯಾಧ್ಯಕ್ಷ ಅಬ್ದುಸ್ಸಲಾಮ್ ಉಪ್ಪಿನಂಗಡಿ, ದ.ಕ. ಜಿಲ್ಲಾಧ್ಯಕ್ಷ ಸಯೀದ್ ಇಸ್ಮಾಯೀಲ್ ಹಾಗೂ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ಮುಖಂಡರಾದ ಕೆ.ಎಂ.ಷರೀಫ್ ಸಂತಾಪ ಸೂಚಿಸಿದ್ದಾರೆ‌.