ಉಚ್ಚಿಲ ಅಂಡರ್ ಪಾಸ್ ನಲ್ಲಿ ಮಳೆ ನೀರು ಶೇಖರಣೆ: ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ

0
666

ಸನ್ಮಾರ್ಗ ವಾರ್ತೆ

ಮಂಗಳೂರು: ತಾಲೂಕಿನ ಸೋಮೇಶ್ವರ ಸಮೀಪದ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ನ ಅಸಮರ್ಪಕ ಕಾಮಗಾರಿಯಿಂದಾಗಿ ಮಳೆ ನೀರು ಶೇಖರಣೆಗೊಳ್ಳುತ್ತಿರುವ ಬಗ್ಗೆ ಹಲವಾರು ಸಲ ಮನವಿ ಸಲ್ಲಿಸಿದರೂ ಸಂಬಂಧ ಪಟ್ಟ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆಯದಿದ್ದರಿಂದ ಬೇಸತ್ತಿರುವ ಗ್ರಾಮಸ್ಥರು ಇಂದು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿ ಬಾರಿ ಮಳೆಯಾದಾಗ ಉಚ್ಚಿಲದ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಸ್ಥಳೀಯರಿಗೆ ಹಾಗೂ ಸಾವರ್ಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ, ಕೇರಳ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅಪೂರ್ಣವಾಗಿದೆ‌. ಈ ಸಮಸ್ಯೆಗೆ ಹಲವು ವರ್ಷಗಳು ಸಂದಿದ್ದರೂ ಕೂಡಾ ಈವರೆಗೆ ಅಂಡರ್ ಪಾಸ್ ‌ನ ಸಮಸ್ಯೆಗೆ ಪರಿಹಾರ ನೀಡಲು ನವಯುಗ ಉಡುಪಿ ಟೋಲ್ ವೇ ಪ್ರೈವೆಟ್ ಲಿಮಿಟೆಡ್ ಮಾತ್ರ ಆಸಕ್ತಿ ತೋರದ್ದರಿಂದ ಅಸಮಾಧಾನಗೊಂಡಿರುವ ಊರಿನ ನಾಗರಿಕರು ಪ್ರತಿಭಟನೆ ನಡೆಸಿದರು.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯ ರಹ್ಮಾನಿಯಾ ಶಾಲೆಯ ಅಧ್ಯಕ್ಷರಾದ ಅಬ್ದುಸ್ಸಲಾಮ್, ಉಚ್ಚಿಲದ ಅಂಡರ್ ಪಾಸ್ ನಲ್ಲಿ ನೀರು ನಿಂತು ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿರುವ ಬಗ್ಗೆ ಹಲವಾರು ಬಾರಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರೂ‌ ಕೂಡಾ ಈವರೆಗೆ ಸಂಬಂಧ ಪಟ್ಟ ಅಧಿಕಾರಿಗಳು ಭರವಸೆ ಮಾತ್ರ ನೀಡುತ್ತಿದ್ದಾರೆ. ಅಲ್ಲದೇ, ರಾಷ್ಟ್ರೀಯ ಹೆದ್ದಾರಿಯ ಕೇವಲ ಒಂದು ಕಡೆ ಮಾತ್ರ ಸರ್ವಿಸ್ ರಸ್ತೆ ಮಾಡಿಲ್ಲ. ‌ಇದರಿಂದ ಹಲವಾರು ಶಾಲೆ ಹಾಗೂ ಮದ್ರಸದ ಮಕ್ಕಳು ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಇದೆ. ಇದು ಅಪಾಯಕಾರಿ. ಆದ್ದರಿಂದ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ತಿಳಿಸಿದ್ದಾರೆ.

ಮಾಜಿ‌ ಪುರಸಭಾ ಸದಸ್ಯ ಸಲಾಮ್ ಜಿ‌.ಎ. ಮಾತನಾಡಿ, ಅಂಡರ್ ಪಾಸ್ ನ ಅಸಮರ್ಪಕ ಕಾಮಗಾರಿಗೆ ನವಯುಗ ಕಂಪನಿಯೇ ಜವಾಬ್ದಾರಿ. ‌ಮಳೆ ನೀರು ನಿಂತಾಗ ಅಗ್ನಿಶಾಮಕ ಸಿಬ್ಬಂದಿಯವರನ್ನು ಕರೆಸಿ ನೀರು ತೆಗೆಸಿ ಕೇವಲ ತಾತ್ಕಾಲಿಕ ಪರಿಹಾರ ನೀಡುತ್ತಾ ಬಂದಿದೆ. ಆದರೆ ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ನೀಡುವವರಿಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ‌‌.

ಮಳೆ ನೀರು ನಿಂತಾಗ ಶಾಲೆ ಹಾಗೂ ಮದ್ರಸದ ಮಕ್ಕಳು ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಉಂಟಾದ್ದರಿಂದ ಹೆದ್ದಾರಿಯ ಮೂಲಕ ರಸ್ತೆ ದಾಟುತ್ತಿದ್ದ ಮೂವರು ವಿದ್ಯಾರ್ಥಿಗಳು ಈಗಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಕೂಡ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಕೆಲಸ ಪೂರ್ಣಗೊಳಿಸದೇ ನವಯುಗದವರು ಟೋಲ್ ತೆಗೆಯುತ್ತಿರುವುದು ಮತ್ತೊಂದು ದುರಂತ. ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೆ ನಾವು ಸುಮ್ಮನಿರಲ್ಲ ಎಂದು ಸ್ಥಳೀಯರಾದ ಅಬ್ದುಲ್ ನಾಸಿರ್ ತಿಳಿಸಿದ್ದಾರೆ.
ಅಂಡರ್ ಪಾಸ್ ನ ಸಮಸ್ಯೆ ಬಗೆಹರಿಯದೆ ಹೋರಾಟದಿಂದ ಹಿಂದೆ ಸರಿಯಲು ಸಾಧ್ಯವಿಲ್ಲವೆಂದು ಗ್ರಾಮಸ್ಥರು ಸ್ಪಷ್ಟ ಸಂದೇಶ ನೀಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ನೀರು ತೆಗೆಯುವುದನ್ನು ತಡೆದ ಪ್ರತಿಭಟನಾಕಾರರು:

ನಿನ್ನೆ ರಾತ್ರಿ ಸುರಿದ ವಿಪರೀತ ಮಳೆಯಿಂದಾಗಿ ಅಂಡರ್ ಪಾಸ್ ನಲ್ಲಿ ನೀರು ನಿಂತಿತ್ತು‌‌‌. ಬೆಳಗ್ಗೆ ಗಮನಿಸಿದ್ದ ಸ್ಥಳೀಯರೊರ್ವರು ಫೋಟೋ ತೆಗೆದು ಬೆಳಗ್ಗೆ ಪುರಸಭಾ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯವರನ್ನು ಕರೆಸಿ ನೀರನ್ನು ಖಾಲಿ ಮಾಡಿ ಸಾ ಸೂಚಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ನೀರು ತೆಗೆಯುವುದಕ್ಕೆ ಬಂದಿರುವುದನ್ನು ಗಮನಿಸಿದ ಪ್ರತಿಭಟನಾಕಾರರು ನೀರು ತೆಗೆಯದಂತೆ ತಡೆದರು‌. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರಿಗೂ ಬಿಡಲ್ಲ ಎಂದು ಪಟ್ಟು ಹಿಡಿದರು‌.