ಪ. ಬಂಗಾಳದಲ್ಲಿ ಫೈವ್ ಸ್ಟಾರ್ ಹೊಟೇಲ್ ಬುಕ್ ಮಾಡಿದ ಬಿಜೆಪಿ: ಚುನಾವಣಾ ಆಯೋಗಕ್ಕೆ ಲೆಕ್ಕ ಇಟ್ಟುಕೊಳ್ಳಿ ಎಂದ ವಿರೋಧ ಪಕ್ಷೀಯರು

0
505

ಸನ್ಮಾರ್ಗ ವಾರ್ತೆ

ಕೋಲ್ಕತಾ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಶತಾಯ ಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿಯ ಹಣದ ಹರಿವನ್ನು ನೋಡಿ ಪ್ರತಿಸ್ಪರ್ಧಿಗಳು ಮೂಗಿಗೆ ಬೆರಳಿಟ್ಟಿದ್ದಾರೆ. ಭಾರತ್ ಬೆಂಝ್‍ನ ರಥದಲ್ಲಿ ಪ್ರಚಾರವನ್ನು ಆರಂಭಿಸಿರುವ ಬಿಜೆಪಿ ತನ್ನ ಚಟುವಟಿಕೆಯನ್ನು ಏಕೀಕರಿಸಲು ರಾಜ್ಯದಲ್ಲಿ ಫೈವ್ ಸ್ಟಾರ್ ಹೊಟೇಲನ್ನು ಬುಕ್ ಮಾಡಿದೆ.

ಬಿಜೆಪಿಯ ಮೀಡಿಯಾ ಸೆಂಟರ್ ನ ಕಾರ್ಯಕರ್ತರು ಹೊಟೇಲ್ ಹಿಂದೂ ಸ್ಥಾನ್ ಇಂಟರ್ ನ್ಯಾಶನಲ್‍ನಲ್ಲಿದ್ದಾರೆ. ಪ್ರಚಾರ ಯೋಜನೆ ರೂಪಿಸಲು, ನಿಯಂತ್ರಿಸಲು ರಾಜ್ಯದ ವಿವಿಧ ಭಾಗಗಳಿಂದ ಬರುವ ನಾಯಕರಿಗೆ ತಂಗಲು ಸೌಕರ್ಯವಿರುವ ಅದ್ದೂರಿ ಹೊಟೇಲನ್ನು ಬಿಜೆಪಿ ಈಗಾಗಲೇ ವ್ಯವಸ್ಥೆ ಮಾಡಿದೆ. ಫೈವ್ ಸ್ಟಾರ್ ಹೊಟೇಲುಗಳನ್ನು ದೀರ್ಘ ಕಾಲಕ್ಕೆ ಬುಕ್ ಮಾಡಲಾಗಿದೆ ಎಂದು ಬಿಜೆಪಿ ನಾಯಕರನ್ನು ಉದ್ಧರಿಸಿ ‘ದ ಟೆಲಿಗ್ರಾಫ್’ ಸಹಿತ ಹಲವು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿಯ ಪಶ್ಚಿಮ ಬಂಗಾಳದ ಕಚೇರಿ ನವೀಕರಣ ಮಾಡಲಾಗುತ್ತಿದ್ದು, ಅಲ್ಲದೆ ಹೊಟೇಲ್‍ಗಳನ್ನು ಬಲ್ಕ್ ಆಗಿ ಬುಕ್ ಮಾಡಲಾಗಿದೆ. ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗ, ಐಟಿ ಸೆಲ್, ವಿಶೇಷವಾಗಿ ಸಜ್ಜುಗೊಳಿಸಿದ ಕಟ್ಟದಿಂದ ಕೆಲಸ ಮಾಡುತ್ತಿದೆ. ನಾಲ್ಕು ಮಹಡಿಯ ಈ ಕಚೇರಿಗೆ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಅದ್ದೂರಿ ಹೊಟೇಲುಗಳನ್ನು ಸಜ್ಜುಗೊಳಿಸಿ ಮಾಧ್ಯಮ ಸೆಂಟರ್ ಮೂಲಕ ಮಾಧ್ಯಮಗಳನ್ನು ಸಂಪರ್ಕಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮ ವಿಭಾಗ ಇರುವ ಕಟ್ಟಕ್ಕೆ ದಿನಾಲು 250 ಊಟ ವಿತರಿಸಲಾಗುತ್ತಿದೆ ಎಂದು ಕೊಲ್ಕತ್ತಾದ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದೇ ವೇಳೆ ಅದ್ದೂರಿ ಹೊಟೇಲ್‍ಗಳಲ್ಲಿ ಕುಳಿತು ಪ್ರಚಾರ ಮಾಡುತ್ತಿರುವ ಬಿಜೆಪಿ ಶ್ರೀಮಂತರ ಪಾರ್ಟಿ ಎನ್ನುವುದನ್ನು ಪಶ್ಚಿಮ ಬಂಗಾಳಕ್ಕೆ ತಿಳಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣೆಯ ಖರ್ಚಿನಲ್ಲಿ ಹೊಟೇಲು ಬಾಡಿಗೆ ಪಡೆಯುವುದು ಸೇರುತ್ತದೆಯೇ ಎಂದು ಚುನಾವಣಾ ಆಯೋಗ ಪರಿಶೀಲಿಸಬೇಕೆಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ. ಇಷ್ಟು ಹಣ ಇಲ್ಲಿಗೆ ಎಲ್ಲಿಂದ ಬರುತ್ತಿದೆ ಎಂದು ಇತರ ರಾಜಕೀಯ ಪಾರ್ಟಿಗಳು ಬಿಜೆಪಿಯನ್ನು ಪ್ರಶ್ನಿಸುತ್ತಿದೆ.

ಹೊಟೇಲು ಕೇಂದ್ರೀಕರಿಸಿ ಮಾಡುತ್ತಿರುವ ಪ್ರಚಾರ ಕಾರ್ಯಕ್ರಮಕ್ಕೆ ಬಿಜೆಪಿಗೇನು ಇದು ಹೊಸದಲ್ಲ. ಆದರೆ ಇದು ಬಂಗಾಳಿಗರಿಗೆ ಪರಿಚಯವಿಲ್ಲ. ಬಿಹಾರ ಚುನಾವಣೆಯ ಕಾಲದಲ್ಲಿ ಪಾಟ್ನದ ಸಮೀಪ ಅದ್ದೂರಿ ಹೊಟೇಲನ್ನು ಬಿಜೆಪಿ ಬುಕ್ ಮಾಡಿತ್ತು. ಇದೇ ವೇಳೆ ಪಶ್ಚಿಮ ಬಂಗಾಳಕ್ಕೆ ಅಪರಿಚಿತವಾಗಿರುವ ಈ ಪ್ರಚಾರ ತಂತ್ರ ಬಿಜೆಪಿಗೆ ಪ್ರಯೋಜನ ತರಬಹುದೇ ಅಥವಾ ಉಲ್ಟಾ ಹೊಡೆಯಬಹುದೇ ಎಂದು ಕಾದು ನೋಡಬೇಕಾಗಿದೆ.