ಸನ್ಮಾರ್ಗ ವಾರ್ತೆ
ಮಂಗಳೂರು: ಸದಾ ಒಂದಿಲ್ಲೊಂದು ವಿವಾದದ ಕೇಂದ್ರವಾಗಿರುವ ಮಂಗಳೂರು-ಕೇರಳ ಗಡಿ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲಪಾಡಿ ಟೋಲ್ ಗೇಟ್ ಕೇಂದ್ರದಲ್ಲಿ ನಗರದ ಖಾಸಗಿ ಸಿಟಿ ಬಸ್ಸುಗಳಿಗೆ ನಿಗದಿಪಡಿಸಿದ ದರದಿಂದ ಜನಸಾಮಾನ್ಯರಿಗೆ ತುಂಬಾ ತೊದರೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆಸಲಾದ ಸಂಧಾನವು ಕೊನೆಗೂ ಯಶಸ್ವಿಯಾಗಿದ್ದು, ಇನ್ನು ಮುಂದೆ ದರ ತೆತ್ತು ತಲಪಾಡಿ ಟೋಲ್ ದಾಟಲು ಸಿಟಿ ಬಸ್ ಮಾಲಕರು ಒಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ಕದ್ರಿಯಲ್ಲಿರುವ ಮಂಗಳೂರು ಮಹಾ ನಗರ ಪಾಲಿಕೆಯ ವಿಭಾಗೀಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ, ಸ್ಥಳೀಯರು ಹಾಗೂ ಸಿಟಿ ಬಸ್ಸು ಮಾಲೀಕರ ಸಂಘದವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿಕೊಂಡು 14 ಸಾವಿರ ರೂಪಾಯಿ ತಿಂಗಳಿಗೆ ಕಟ್ಟಿ, ಅನಿಯಮಿತ ಪಾಸುಗಳನ್ನು ಕೊಡುವುದರ ಬಗ್ಗೆ ಸಭೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಮಾಡಲಾಯಿತು.
ಇನ್ನು ಮುಂದೆ ಎಲ್ಲಾ ಮಂಗಳೂರಿನ ಸಿಟಿ ಬಸ್ಸುಗಳು ತಲಪಾಡಿಯನ್ನು ದಾಟಿಕೊಂಡು ಮುಂದಿನ ಬಸ್ಸು ನಿಲ್ದಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.
ಟಿಕೆಟ್ ದರ 2 ರೂ. ಹೆಚ್ಚಳ ಸಂಭವ:
ಸಿಟಿ ಬಸ್ಸುಗಳಿಗೆ 14,000 ಟೋಲ್ ನಿಗದಿಪಡಿಸಿರುವುದರಿಂದ ಮಂಗಳೂರಿಂದ ಮೇಲಿನ ತಲಪಾಡಿಗೆ ಸಂಚರಿಸುವ ಪ್ರಯಾಣಿಕರ ಟಿಕೆಟ್ ದರದಲ್ಲಿ 2 ರೂಪಾಯಿ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.
ತಲಪಾಡಿಯ ಟೋಲ್ ನಲ್ಲಿ ದುಬಾರಿ ಸುಂಕ ವಿಧಿಸಿದ್ದ ಕಾರಣಕ್ಕೆ ಟೋಲ್ ದಾಟಲು ನಿರಾಕರಿಸಿದ್ದ ಸಿಟಿ ಬಸ್ಸುಗಳು ಪ್ರಯಾಣಿಕರನ್ನು ಟೋಲ್ ದಾಟಿಸದೆ ಅರ್ಧದಲ್ಲಿ ಇಳಿಸುತ್ತಿದ್ದರು. ಟೋಲ್ ಮತ್ತು ಖಾಸಗಿ ಬಸ್ಸುಗಳ ನಡುವೆ ಸಮನ್ವಯ ಇಲ್ಲದ ಪರಿಣಾಮವಾಗಿ ಪ್ರಯಾಣಿಕರಿಗೆ ಇದೊಂದು ಸಮಸ್ಯೆಯಾಗಿ ಪರಿಣಮಿಸಿತ್ತು ಈ ಹಿನ್ನಲೆಯಲ್ಲಿ ಪ್ರಯಾಣಿಕರು ಬಸ್ಸಿನಿಂದ ಅರ್ಧದಲ್ಲಿ ಇಳಿದು, ನಡೆದುಕೊಂಡು ಹೋಗಬೇಕಾಗಿತ್ತು. ಇದು ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಆಗುತ್ತಿರುವುದನ್ನು ಹಲವಾರು ಮಂದಿ ಮಾಧ್ಯಮಗಳ ಗಮನ ಸೆಳೆದಿದ್ದರು. ಈ ಹಿಂದೆ ಸಿಟಿಬಸ್ ನವರು ಏಳೂವರೆ ಸಾವಿರ ರೂಪಾಯಿ ತಿಂಗಳಿಗೆ ಟೋಲ್ ಕಟ್ಟುತ್ತಿದ್ದರು. ಈ ಮಧ್ಯೆ ಟೋಲ್ ದರದಲ್ಲಿ ಏರಿಕೆ ಮಾಡಿದ್ದರಿಂದ ನವಯುಗ ಕಂಪೆನಿ ಹಾಗೂ ಸಿಟಿ ಬಸ್ ನವರಿಗೆ ಜಟಾಪಟಿ ಸಂಭವಿಸಿತ್ತು.













