ಒಡಿಶಾ: ಕನ್ಯಾದಾನದ ವೇಳೆ ಹೃದಯಾಘಾತವಾಗಿ ಮೃತಪಟ್ಟ ವಧು

0
1444

ಸನ್ಮಾರ್ಗ ವಾರ್ತೆ

ಸೋನೆಪುರ: ಹಿಂದೂ ಧರ್ಮದ ವಿವಾಹದ ಸಂದರ್ಭದಲ್ಲಿ ನಡೆಯುವ ಕನ್ಯಾದಾನದ ವೇಳೆ ವಧುವಿಗೆ ಹೃದಯಾಘಾತವಾಗಿ ಕುಸಿದುಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಒಡಿಶಾದ ಸೋನೆಪುರ ಜಿಲ್ಲೆಯಲ್ಲಿ ನಡೆದಿದೆ.

ಸೋನೆಪುರ ಜಿಲ್ಲೆಯ ಬಿನಿಕಾ ಬ್ಲಾಕ್ ಸಮೀಪದ ಜುಲುಂಡಾ ಗ್ರಾಮದ ಮುರಳಿ ಸಾಹೂ ಮತ್ತು ಮೇನಕಾ ಅವರ ಪುತ್ರಿ, ವಧು ಗುಪ್ತೇಶ್ವರಿ ಸಾಹೂ (ರೋಸಿ) ಎಂಬ ಯುವತಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಯುವತಿಯಾಗಿದ್ದಾಳೆ.

ವಧು ಗುಪ್ತೇಶ್ವರಿ ಸಾಹೂ ಅವರ ವಿವಾಹವು ಕಳೆದ ಗುರುವಾರ ಟೆಂಟುಲು ಗ್ರಾಮದ ಬಿಸಿಕೇಶನ್ ಪ್ರಧಾನ್ ಅವರೊಂದಿಗೆ ನಡೆದಿತ್ತು. ಶುಕ್ರವಾರ ಸಂಜೆ ವಧುವಿನ ಪೋಷಕರ ಮನೆಯಲ್ಲಿ ನಡೆಯುತ್ತಿದ್ದ ಕನ್ಯಾದಾನದ ಸರಳ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಮದುವೆಯ ಸಂಭ್ರಮಾಚರಣೆಯಲ್ಲಿದ್ದ ಕುಟುಂಬವನ್ನು ಶೋಕಕ್ಕೆ ತಿರುಗಿಸಿತು.

ಒಡಿಶಾದಲ್ಲಿ ಬಿದಾಯಿ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ವಧು ಗುಪ್ತೇಶ್ವರಿ ಕೂಗುತ್ತಲೇ ಇದ್ದಳು. ಈ ಸಂದರ್ಭದಲ್ಲಿ ನೆಲದ ಮೇಲೆ ಕುಸಿದು ಬಿದ್ದ ಆಕೆಯನ್ನು ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಅವಳ ಕೈಗಳಿಗೆ ಮಸಾಜ್ ಮಾಡಿ ಮುಖಕ್ಕೆ ನೀರು ಸಿಂಪಡಿಸುವ ಮೂಲಕ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ, ತಕ್ಷಣವೇ ಡುಂಗುರಿಪಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಕರೆದೊಯ್ಯಲಾಯಿತು. ಪರೀಕ್ಷಿಸಿದ ಅಲ್ಲಿನ ವೈದ್ಯರು, ಹೃದಯಾಘಾತವಾಗಿ ಮೃತಪಟ್ಟಿದ್ದಾರೆಂದು ಘೋಷಿಸಿದರು. ಮಾಹಿತಿ ಪಡೆದ ನಂತರ ಬಿನಿಕಾ ಪೊಲೀಸರು ಆಸ್ಪತ್ರೆಗೆ ಧಾವಿಸಿ, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ವಧುವಿನ ತಂದೆ ಮುರಳಿ ಸಾಹೂ ಎಂಬವರು ಕೆಲ ತಿಂಗಳ ಹಿಂದೆಯಷ್ಟೇ ನಿಧನ ಹೊಂದಿದ್ದರು. ತಂದೆಯ ನಿಧನದ ನೆನಪಿನ ಮಧ್ಯೆಯೇ ಆಕೆಯ ಪೋಷಕರು ಮದುವೆ ಮಾಡಲು ನಿಶ್ಚಯಿಸಿ, ಸಮಾರಂಭ ಆಯೋಜಿಸಿದ್ದರು. ಇದು ಅತ್ಯಂತ ದುರದೃಷ್ಟಕರ ಘಟನೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.