ಸನ್ಮಾರ್ಗ ವಾರ್ತೆ
ಉಪ್ಪಿನಂಗಡಿ: ತಂದೆ-ತಾಯಿಗಳು ಶತ್ರುಗಳಾಗಿ ಇತರರೆಲ್ಲರೂ ತಮ್ಮ ಮಿತ್ರರು ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡಿದರೆ ನಾವು ಎಲ್ಲೋ ತಪ್ಪಿದ್ದೇವೆ ಎಂಬುದನ್ನು ಯುವಕ-ಯುವತಿಯರು ಅರ್ಥಮಾಡಿಕೊಳ್ಳಬೇಕು ಎಂದು ಮಂಗಳೂರಿನ ಖ್ಯಾತ ವೈದ್ಯರಾದ ಅಬ್ದುಲ್ ಮಜೀದ್ ಹೇಳಿದರು. ಅವರು ಆತೂರು ಆಯಿಶಾ ವಿದ್ಯಾಸಂಸ್ಥೆಯಲ್ಲಿ ನಡೆದ ಜಮಾಅತ್ ಬಾಂಧವರ ಕುಟುಂಬ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ನಾವೆಷ್ಟೇ ನೋವು ಅನುಭವಿಸುತ್ತಿದ್ದರೂ ಇತರರ ಮುಂದೆ ನಗುನಗುತ್ತಾ ಇರಲು ಪ್ರಯತ್ನಿಸಬೇಕು. ನಮ್ಮ ನೋವನ್ನು ಹಂಚಿಕೊಳ್ಳಲು ಸೃಷ್ಟಿಕರ್ತನೇ ಅರ್ಹ. ಎಲ್ಲವನ್ನೂ ಅವನ ಮುಂದೆಯೇ ತೋಡಿಕೊಳ್ಳಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ನ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ಮಾತನಾಡಿ ಪ್ರೀತಿ, ಅನುಕಂಪ, ಹೊಂದಾಣಿಕೆಯೇ ಕುಟುಂಬ ಜೀವನದ ಯಶಸ್ಸಿಗೆ ಅತಿ ಅಗತ್ಯ ಪರಸ್ಪರ ಅರಿತು ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸಬೇಕು ಎಂದು ಹೇಳಿದರು.
ಕೌಟುಂಬಿಕ ಜೀವನವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವಂತಹ ಕಾಲದಲ್ಲಿ ನಾವಿದ್ದೇವೆ. ಗೃಹ ಪೀಡನೆ, ವರದಕ್ಷಿಣೆ ಹಿಂಸೆಗಳಿಂದ ಕುಟುಂಬ ಜೀವನವನ್ನು ರಕ್ಷಿಸುವ ಅಗತ್ಯವಿದೆ ಎಂದು ಫಾರ್ವರ್ಡ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷೆ ಮರ್ಯಮ್ ಶಹೀರಾ ಹೇಳಿದರು.
ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶಮೀಲ ನಜೀಬ್, ಅಬ್ದುಲ್ ಹಸೀಬ್, ಸಲೀಮ್ ಬೋಳಂಗಡಿ, ಸಿಹಾನ ಬಿ.ಎಂ ಭಾಗವಹಿಸಿದ್ದರು. ಡಾ.ಅಬ್ದುಲ್ ಮಜೀದ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೂವರು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾಕ್ಟರ್ ವಿದೌಟ್ ಬಾರ್ಡರ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಡಾ. ಶಾಝೀರ್ ರವರ ಅನುಪಸ್ಥಿತಿಯಲ್ಲಿ ಅವರ ಹೆತ್ತವರಾದ ಡಾಕ್ಟರ್ ಅಬ್ದುಲ್ ಮಜೀದ್ ಮತ್ತು ಆಯಿಶಾ ದಂಪತಿಗಳನ್ನು ಸನ್ಮಾನಿಸಲಾಯಿತು. ಡಾ| ಜಮಾಲುದ್ದೀನ್ ಹಿಂದಿ ಮತ್ತು ಅಡ್ವೊಕೇಟ್ ರೈಹಾನ.ಕೆ ಅವರನ್ನು ಸನ್ಮಾನಿಸಲಾಯಿತು.
“ಸದೃಢ ಕುಟುಂಬ ಸುಭದ್ರ ಸಮಾಜ” ಅಭಿಯಾನದ ನಿಮಿತ್ತ ನಡೆಸಿದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ತಸ್ನೀಮ ಇಬ್ರಾಹಿಂ(ಪ್ರಥಮ), ಸಲ್ಮಾ ಸಈದ್(ದ್ವಿತೀಯ), ಪ್ರಮೀಳಾ ಕಾರ್ಕಳ(ತೃತಿಯ), ಝಬೀನಾ ಮಂಗಳೂರು(ತೃತೀಯ) ಬಹುಮಾನವನ್ನು ಪಡೆದರು. ಭಾಷಣ ಸ್ಪರ್ಧೆಯಲ್ಲಿ ಆಯತುಲ್ ಮಿಸ್ರಿಯಾ(ಪ್ರಥಮ), ರಝ್ಮ( ದ್ವಿತೀಯ) ಬಹುಮಾನವನ್ನು ಪಡೆದರು. ಝಾಕಿರ್ ಹುಸೇನ್ ಮಂಗಳೂರು ರವರು ಕ್ವಿಝ್ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಹಿರಿಯರು, ಮಕ್ಕಳು, ಮಹಿಳೆಯರು ಮತ್ತು ಪುರುಷರು ಎಲ್ಲರಿಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಬ್ರದರ್ ಮಹಮ್ಮದ್ ಇಹ್ಸಾನ್ ಕುರ್ಆನ್ ಪಠಿಸಿದರು. ಅಬ್ದುಲ್ ಹಸೀಬ್ ಸ್ವಾಗತಿಸಿದರು. ಅನ್ವರ್ ಸಾದತ್ ಕಾರ್ಯಕ್ರಮ ನಿರೂಪಿಸಿದರು.












