ಸನ್ಮಾರ್ಗ ವಾರ್ತೆ
ಹಾಸನ: ಶ್ರೀಮಂತಿಕೆ ಎಂಬುದು ಸಂಪತ್ತಿನ ಆಧಿಕ್ಯದ ಹೆಸರಲ್ಲ, ಬದಲಾಗಿ ನಿಮ್ಮ ಮನಸ್ಸಿನ ಶ್ರೀಮಂತಿಕೆಯೇ ನಮ್ಮ ಸಂತೃಪ್ತಿಯ ಬದುಕಿಗೆ ಕಾರಣ. ಆ ಮನಸ್ಸಿನ ಶ್ರೀಮಂತಿಕೆಯನ್ನು ಗಳಿಸಲು ಶ್ರಮಿಸುವ ಅಗತ್ಯವಿದೆ” ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿಯವರು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್, ಹಾಸನ ಘಟಕದ ವತಿಯಿಂದ “ಯಶಸ್ವಿ ಜೀವನ” ಮತ್ತು “ಸ್ವಸ್ಥ ಸಮಾಜ” ಎಂಬ ವಿಷಯದ ಕುರಿತು ಇಸ್ಲಾಮಿಕ್ ಸೆಂಟರ್, ಹೆಚ್.ಎನ್. ಪುರ ಹಾಸನದಲ್ಲಿ ಆಯೋಜಿಸಲಾಗಿದ್ದ ಕನ್ನಡದಲ್ಲಿ ಎರಡು ದಿನದ ಸಾರ್ವಜನಿಕ ಕುರ್’ಆನ್ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
“ಯಶಸ್ವಿ ಜೀವನ” ದ ಕುರಿತು ಮಾತನಾಡುತ್ತಾ “ನೆಮ್ಮದಿಯೆಂಬುದು ಹಣ ಮತ್ತು ಸಂಪತ್ತಿನಿಂದ ಸಿಗುವ ವಸ್ತುವಲ್ಲ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಿರುವ ಕಾರಣಕ್ಕೆ, ನೀವು ಓಡಾಡುವ ಕಾರಿನ ಕಾರಣಕ್ಕೆ, ನೀವು ವಾಸಿಸುವ ದೊಡ್ಡ ಮನೆಯ ಕಾರಣಕ್ಕೆ ನಿಮಗೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಬದಲಾಗಿ ನೆಮ್ಮದಿ ಸಿಗುವುದು ಪುಸ್ತಕಗಳನ್ನು ಓದುವುದರಿಂದ ಮತ್ತು ಧರ್ಮಗ್ರಂಥಗಳನ್ನು ಅರಿಯುವುದರಿಂದ. ಆದರೆ ಇಂದು ಮನೆಗಳ ಕಿಚನ್, ಬೆಡ್ ರೂಮ್ ಮತ್ತು ಶೌಚಾಲಯಗಳಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವ ನಾವು ನಮ್ಮ ಮನೆಗಳಲ್ಲಿ ಹೃದಯವನ್ನು ಶುದ್ಧೀಕರಿಸುವ ಹತ್ತು ಸಾವಿರ ರೂಪಾಯಿಯ ಪುಸ್ತಕಗಳನ್ನು ಖರೀದಿಸಲು ಸಿದ್ಧರಿಲ್ಲ” ಎಂದವರು ಹೇಳಿದರು.
ಯಾಕೆ ಇಂದು ಸಂಪತ್ತು ಹೆಚ್ಚು ಇರುವಲ್ಲಿ ಡಿಪ್ರೇಶನ್ ಹಚ್ಚುತ್ತಿದೆ? ಸಂತೋಷ ಇರುವಲ್ಲಿ ಆತ್ಮಹತ್ಯೆಗಳು ಅಧಿಕವಾಗುತ್ತಿವೆ? ಏಕೆಂದರೆ ಶ್ರೀಮಂತಿಕೆ ಎಂಬುದು ಸಂಪತ್ತಿನ ಆಧಿಕ್ಯದ ಹೆಸರಲ್ಲ, ಬದಲಾಗಿ ನಿಮ್ಮ ಮನಸ್ಸಿನ ಶ್ರೀಮಂತಿಕೆಯೇ ನಿಮ್ಮ ಸಂತೃಪ್ತಿಯ ಬದುಕಿಗೆ ಕಾರಣ. ಆ ಮನಸ್ಸಿನ ಶ್ರೀಮಂತಿಕೆಯನ್ನು ಗಳಿಸಲು ಶ್ರಮಿಸುವ ಅಗತ್ಯವಿದೆ” ಎಂದರು.
“ಕರುಣೆ ಪ್ರೀತಿಗಿಂತ ಶ್ರೇಷ್ಠವಾಗಿದ್ದು ಇಂದು ವಿದ್ಯೆ ಹೆಚ್ಚಾಗುತ್ತಿದ್ದರೂ ಸಮಾಜದಲ್ಲಿ ಕರುಣೆ ಕಡಿಮೆಯಾಗುತ್ತಿದೆ. ಸ್ವಸ್ಥ ಕುಟುಂಬವು ಸ್ವಸ್ಥ ಸಮಾಜದ ಅಡಿಪಾಯವಾಗಿದೆ. ನನ್ನ ಮಕ್ಕಳು ಸಹ ನನ್ನ ಹಾಗೆಯೇ ಆಗಬೇಕೆಂದು ಬಯಸುವ ತಂದೆ ತಾಯಿ ಇರುವ ಕುಟುಂಬವು ಸ್ವಸ್ಥ ಕುಟುಂಬವಾಗಿದೆ, ಪತಿ-ಪತ್ನಿಯರು ತಮ್ಮ ಪ್ರೀತಿಯನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು, ತಂದೆ ತಾಯಿಯ ಸೇವೆ ಬಹಳ ದೊಡ್ಡ ಪುಣ್ಯವಾಗಿದೆ, ತಂದೆ-ತಾಯಂದಿರ ಕಣ್ಣೀರಿಗೆ ನಮ್ಮನ್ನು ನರಕಕ್ಕೆ ತಳ್ಳುವ ಶಕ್ತಿಯಿದೆ. ಜಗತ್ತಿನಲ್ಲಿರುವ ಎಲ್ಲ ಮನುಷ್ಯರು ದೇವನ ಕುಟುಂಬದವರಾಗಿದ್ದು ಎಲ್ಲಿಯ ತನಕ ನಾವು ಪರಸ್ಪರ ಕರುಣೆ ತೋರುವುದಿಲ್ಲವೋ ಅಲ್ಲಿಯ ತನಕ ನಾವು ಸ್ವರ್ಗವನ್ನು ಪ್ರವೇಶಿಸಲಾರೆವು. ಇದುವೇ ಸ್ವಸ್ಥ ಸಮಾಜಕ್ಕೆ ಬುನಾದಿಯಾದಿದೆ. ಪವಿತ್ರ ಕುರ್’ಆನ್ ನ್ಯಾಯ ಮತ್ತು ಪರೋಪಕಾರದ ಮನೋಭಾವವನ್ನು ಬೆಳೆಸಿ ನಮ್ಮ ಮನಸ್ಸುಗಳೊಳಗಿನ ರೋಗಗಳನ್ನು ಗುಣಪಡಿಸಿ ಅನ್ಯಾಯ ಮತ್ತು ಕೆಡುಕಿನ ನಿರ್ಮೂಲನ ಮಾಡಿ, ಭ್ರಷ್ಟಾಚಾರವನ್ನು ಹೋಗಲಾಡಿಸಿ ಕೆಟ್ಟು ಹೋದ ವ್ಯವಸ್ಥೆಯನ್ನು ಸರಿಪಡಿಸಿ ಒಂದು ಸ್ವಸ್ಥ ಸಮಾಜವನ್ನು ನಿರ್ಮಿಸಲು ನೇರವಾದ ಮಾರ್ಗದರ್ಶನ ನೀಡುತ್ತದೆ. ಅಶ್ಲೀಲತೆಯನ್ನು ನಿಷೇಧಿಸಿ, ನೀವು ನಿಮ್ಮನ್ನು ಗೌರವಿಸಬೇಕು ಮತ್ತು ಸಂಶಯಗಳಿಂದ ದೂರವಿರಬೇಕೆಂದು ನಿರ್ದೇಶಿಸುತ್ತಾ ಯಾವಾಗಲೂ ಪಾಸಿಟಿವ್ ಆಗಿರಬೇಕು ಎಂದು ಪವಿತ್ರ ಕುರ್’ಆನ್ ಮಾರ್ಗರ್ಶನ ಮಾಡುತ್ತದೆ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಸನದ ಶಾಸಕ ಪ್ರೀತಮ್ ಜೆ. ಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಚ್.ಪಿ. ಮೋಹನ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ.ಆರ್, ಶ್ರೀ ಚಾಮರಾಜೇಂದ್ರ ಆಸ್ಪತ್ರೆಯ ನಿರ್ದೇಶಕರಾದ ಡಾ. ಬಿ.ಸಿ. ರವಿಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಎಸ್. ಪ್ರಕಾಶ್, ಜನತಾ ಮಾಧ್ಯಮ ದಿನಪತ್ರಿಕೆಯ ಸಂಪಾದಕ ಆರ್.ಪಿ. ವೆಂಕಟೇಶ್ ಮೂರ್ತಿ, ಹಾಸನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.













