ಕೊರೋನ ಎರಡನೆಯ ಅಲೆ: 50ಸಾವಿರ ಹೊಸ ಸೋಂಕು ಪ್ರಕರಣಗಳು; 212 ಸಾವು

0
551

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಎರಡನೇ ಬಾರಿ ಒಕ್ಕರಿಸಿಕೊಂಡಿದ್ದು 24 ಗಂಟೆಗಳಲ್ಲಿ 46,951 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ನವೆಂಬರ್ ಏಳರ ನಂತರ ವರದಿಯಾದ ಅತ್ಯಂತ ಹೆಚ್ಚಿನ ದತ್ತಾಂಶ ಇದು ಎಂದು ಆರೋಗ್ಯ ಮಂತ್ರಾಲಯ ಹೇಳಿದೆ.

ದೇಶದಲ್ಲಿ ಇದುವರೆಗೆ 1,16,46,081 ಮಂದಿಗೆ ಕೊರೋನ ಸೋಂಕು ತಗುಲಿದೆ. 1,11,51,468 ಮಂದಿ ರೋಗದಿಂದ ಗುಣಮುಖರಾಗಿದ್ದು, 3,34,646 ಮಂದಿ ಚಿಕಿತ್ಸೆ ಈಗ ಪಡೆಯುತ್ತಿದ್ದಾರೆ 212 ಮಂದಿ ನಿನ್ನೆ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆಯು 1,59,967ಕ್ಕೆ ಏರಿಕೆಯಾಗಿದೆ ಎಂಬುದಾಗಿ ಆರೋಗ್ಯ ಮಂತ್ರಾಲಯ ತಿಳಿಸಿದೆ.

ಈ ನಡುವೆ ದೇಶದಲ್ಲಿ ವ್ಯಾಕ್ಸಿನೇಶನ್ ನಡೆಯುತ್ತಿದ್ದು, 4,50,65,998 ಮಂದಿಗೆ ಈವರೆಗೆ ವ್ಯಾಕ್ಸಿನ್ ಕೊಡಲಾಗಿದೆ. ನಾಲ್ಕು ತಿಂಗಳಿನಿಂದ ಕೊರೋನ ಪೀಡಿತರ ಸಂಖ್ಯೆ ಕಡಿಮೆಯಾಗಿತ್ತು. ಒಂದು ವಾರದಿಂದ ಪುನಃ ಹೆಚ್ಚಳವಾಗಿದ್ದು, ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಕೊರೋನ ಪ್ರಕರಣಗಳು ವರದಿಯಾಗಿವೆ. 24 ಗಂಟೆಗಳಲ್ಲಿ 30,535 ಮಂದಿಗೆ ಮಹಾರಾಷ್ಟ್ರದಲ್ಲಿ ಕೊರೋನ ದೃಢಪಟ್ಟಿದೆ. ಇಲ್ಲಿ ರೋಗಿಗಳ ಸಂಖ್ಯೆ 24,79,682ಕ್ಕೆ ಏರಿಕೆಯಾಗಿದೆ. ಪಂಜಾಬ್‌ನಲ್ಲಿ 2644, ಕೇರಳದಲ್ಲಿ 1875, ಗುಜರಾತ್ 1580 ಮಂದಿಗೆ ಹೊಸದಾಗಿ ಕೊರೋನ ವೈರಸ್ ತಗಲಿದೆ.