ಅಮೇರಿಕಾದ ಸರ್ಜನ್ ಜನರಲ್ ಆಗಿ ಕರ್ನಾಟಕ ಮೂಲದ ವೈದ್ಯ ವಿವೇಕ್ ಮೂರ್ತಿ ಆಯ್ಕೆ

0
505

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್ ಡಿಸಿ: ಕರೋನ ವೈರಸ್ ಸಾಂಕ್ರಾಮಿಕದ ಮಧ್ಯೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಿದ ಆರೋಗ್ಯ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಕರ್ನಾಟಕ ಮೂಲದ ವೈದ್ಯ ವಿವೇಕ್ ಮೂರ್ತಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ರವರ ಸರ್ಜನ್ ಜನರಲ್ ಆಗಿ ಆಯ್ಕೆಯಾಗಿರುವುದನ್ನು ಯುಎಸ್ ಸೆನೆಟ್ ದೃಢೀಕರಿಸಿದೆ.

ಅಧ್ಯಕ್ಷ ಬೈಡೆನ್ ರವರ ಸರ್ಜನ್ ಜನರಲ್ ಆಯ್ಕೆ ಪ್ರಕ್ರಿಯೆಗೆ ಚುನಾವಣೆ ನಡೆಡಿದ್ದು, ಯುಎಸ್ ಸೆನೆಟರ್ ಗಳು 57-43 ಮತ ಚಲಾಯಿಸುವ ಮೂಲಕ ಇಂಡಿಯನ್- ಅಮೆರಿಕನ್ ಆಗಿರುವ ವಿವೇಕ್ ಮೂರ್ತಿ ಯವರು ಹೆಸರನ್ನು ದೃಢೀಕರಿಸಿದರು.

ಡಾ.ಮೂರ್ತಿಯವರು ಬರಾಕ್ ಒಬಾಮಾರ ಆಡಳಿತದಲ್ಲಿ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಆದರೆ ಅವರನ್ನು 2017 ರಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾ ಮಾಡಿದ್ದರು.

“ನಿಮ್ಮ ಸರ್ಜನ್ ಜನರಲ್ ಆಗಿ ಮತ್ತೊಮ್ಮೆ ಸೇವೆ ಸಲ್ಲಿಸಲು ಸೆನೆಟ್ ದೃಢಪಡಿಸಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಕಳೆದ ಒಂದು ವರ್ಷದಿಂದ ನಾವು ರಾಷ್ಟ್ರವಾಗಿ ಬಹಳ ಕಷ್ಟಗಳನ್ನು ಸಹಿಸಿಕೊಂಡಿದ್ದೇವೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ರಾಷ್ಟ್ರವನ್ನು ಕೊರೋನಾದಿಂದ ಮುಕ್ತವಾಗಲು ಹಾಗೂ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ” ಯುಎಸ್ ಸೆನೆಟ್ ಸರ್ಜನ್ ಜನರಲ್ ಆಗಿ ದೃಢೀಕರಿಸಿದ ಬಳಿಕ ಎಂದು ವಿವೇಕ್ ಮೂರ್ತಿ ಟ್ವೀಟ್ ಮಾಡಿದ್ದಾರೆ.

ಡಾ. ಮೂರ್ತಿ ಮೂಲತಃ ಅಮೇರಿಕಾದಲ್ಲಿ ಒಬ್ಬ ಪ್ರಖ್ಯಾತ ವೈದ್ಯರಾಗಿದ್ದು ಮತ್ತು ಸಾರ್ವಜನಿಕ ಆರೋಗ್ಯ ಸೇವೆ ಆಯೋಗದ ದಳದಲ್ಲಿ ಮಾಜಿ ವೈಸ್ ಅಡ್ಮಿರಲ್ ಆಗಿ ಸೇವೆ ಸಲ್ಲಿಸಿದ್ದಾರೆ.

1977ರಲ್ಲಿ ಅಮೇರಿಕಾದಲ್ಲಿ ಜನಿಸಿರುವ ಡಾ. ಮೂರ್ತಿಯವರು ಮೂಲತಃ ಕರ್ನಾಟಕದವರು. ಮೈಸೂರು ಸಕ್ಕರೆ ಕಂಪನಿಯ ಮಾಜಿ ನಿರ್ದೇಶಕರಾದ ದಿವಂಗತ ಎಚ್ ಸಿ ನಾರಾಯಣ ಮೂರ್ತಿ ಅವರ ಮೊಮ್ಮಗನಾಗಿದ್ದಾರೆ. ಇವರ ತಂದೆ ಡಾ.ಎಚ್.ಎನ್ ಲಕ್ಷ್ಮೀ ನರಸಿಂಹ ಮೂರ್ತಿ ಮತ್ತು ತಾಯಿ ಮೈತ್ರೈಯಿ ಮೂರ್ತಿ ದಂಪತಿ 1978 ರಲ್ಲಿ ಅಮೆರಿಕಾಕ್ಕೆ ವಲಸೆ ಹೋಗಿ, ವೈದ್ಯ ವೃತ್ತಿ ಮಾಡುತ್ತಿದ್ದರು. ಡಾ. ಎಚ್. ಎನ್ ಲಕ್ಷ್ಮೀನರಸಿಂಹ ಮೂರ್ತಿಯವರು ಅಲ್ಲಿ ಜಿಲ್ಲಾ ವೈದ್ಯಕೀಯ ಅಧಿಕಾರಿಯಾಗಿ ಕೂಡ ಕೆಲಸ ಮಾಡಿದ್ದಾರೆ.