ಪಾಕಿಸ್ತಾನದೊಂದಿಗೆ ಭಾರತ ಸೌಹಾರ್ದಯುತ ಸಂಬಂಧ ಬಯಸುತ್ತದೆ: ‘ಪಾಕ್ ದಿನಾಚರಣೆ’ಗೆ ಕಳುಹಿಸಿದ ಪತ್ರದಲ್ಲಿ ಪ್ರಧಾನಿ ಮೋದಿ

0
580

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತವು ಪಾಕಿಸ್ತಾನದೊಂದಿಗಿನ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ. ಆದರೆ ಭಯೋತ್ಪಾದನೆ ಮತ್ತು ಹಗೆತನವಿಲ್ಲದ ವಿಶ್ವಾಸದ ವಾತಾವರಣವು ಅದಕ್ಕೆ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪಾಕಿಸ್ತಾನದ ಸಹವರ್ತಿ ಇಮ್ರಾನ್ ಖಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿರುವುದಾಗಿ ಎನ್ ಡಿ ಟಿ ವಿ ವರದಿ ಮಾಡಿದೆ.

ಮಾರ್ಚ್ 23 ರಂದು ಆಚರಿಸುವ ‘ಪಾಕಿಸ್ತಾನ ದಿನಾಚರಣೆ’ ಯ ಹಿನ್ನೆಲೆಯಲ್ಲಿ ಆ ದೇಶದ ಜನರಿಗೆ ಶುಭಾಶಯ ಕೋರಲು ಪ್ರಧಾನಿ ಮೋದಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.

“ನೆರೆಯ ರಾಷ್ಟ್ರವಾಗಿ, ಭಾರತವು ಪಾಕಿಸ್ತಾನದ ಜನರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ. ಇದಕ್ಕಾಗಿ, ಭಯೋತ್ಪಾದನೆ ಮತ್ತು ಹಗೆತನವಿಲ್ಲದ ನಂಬಿಕೆಯ ವಾತಾವರಣವು ಕಡ್ಡಾಯವಾಗಿದೆ” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಇದು ಪ್ರತಿವರ್ಷ ಕಳುಹಿಸುವ ವಾಡಿಕೆಯ ಪತ್ರವಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಕೊರೋನ ವೈರಸ್ ನ ಸವಾಲುಗಳನ್ನು ಎದುರಿಸುವಲ್ಲಿ ಶ್ರಮಿಸಿದ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಜನರಿಗೆ ಶುಭಾಶಯಗಳನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿರುವುದಾಗಿ ತಿಳಿದು ಬಂದಿದೆ.

ಮಾರ್ಚ್ 23, 1940 ರಂದು ಅಖಿಲ ಭಾರತ ಮುಸ್ಲಿಂ ಲೀಗ್ ಭಾರತದ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರವನ್ನು ಕೋರಿದಾಗ ಲಾಹೋರ್ ನಿರ್ಣಯವನ್ನು ಗುರುತಿಸಲು ಪಾಕಿಸ್ತಾನ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೂಡ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿಗೆ ಪ್ರತ್ಯೇಕ ಸಂದೇಶವನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.