ಅದಾನ್‍ನಿಂದ ಕೆಲಸಕ್ಕೆ ತೊಂದರೆ: ಲೌಡ್ ಸ್ಪೀಕರ್ ವಿರುದ್ಧ ಕೋರ್ಟ್ ಮೊರೆ ಹೋದ ಉ.ಪ್ರದೇಶ ಸಚಿವ

0
685

ಸನ್ಮಾರ್ಗ ವಾರ್ತೆ

ಲಕ್ನೊ: ಹತ್ತಿರದ ಮಸೀದಿಯಿಂದ ಐದು ಹೊತ್ತು ಅದಾನ್(ಬಾಂಗ್) ಕರೆ ನೀಡುತ್ತಿದ್ದಾರೆ. ಇದರಿಂದ ಯೋಗ, ಧ್ಯಾನ, ಪೂಜೆ, ಸರಕಾರದ ಹೊಣೆಗಾರಿಕೆ ನಿರ್ವಹಿಸಲು ಅಡ್ಡಿಯಾಗುತ್ತಿದೆ ಎಂದು ಉತ್ತರ ಪ್ರದೇಶ ಸಚಿವರೊಬ್ಬರು ಮಂಗಳವಾರ ಬಿಲ್ಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ದೂರು ನೀಡಿದ್ದಾರೆ.

ಮೈಕಿನಲ್ಲಿ ಬಾಂಗ್ ಕೊಡುವುದಕ್ಕೆ ತಗಾದೆ ಎತ್ತಿದವರು ಉತ್ತರಪ್ರದೇಶ ಸರಕಾರದ ಗ್ರಾಮಾಭಿವೃದ್ಧಿ, ಪಾರ್ಲಿಮೆಂಟರಿ ವಿಷಯಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ ಪ್ರತಿದಿನ ಮಸೀದಿಯಲ್ಲಿ ನೀಡಲಾಗುವ ಐದು ಹೊತ್ತಿನ ಅದಾನ್‌ನಿಂದಾಗಿ ಯೋಗ, ಧ್ಯಾನ, ಪೂಜೆ ಸರಕಾರದ ಹೊಣೆಗಾರಿಕೆ ನಿರ್ವಹಿಸುವುದು ನನಗೆ ಕಷ್ಟ ಆಗುತ್ತಿದೆ ಎಂಬುದಾಗಿ ತನ್ನ ಕ್ಷೇತ್ರದ ಕಾಜಿಪುರ ಮದೀನ ಮಸೀದಿಯ ಹೆಸರನ್ನು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ ಮಸೀದಿಯ ಸಮೀಪ ಹಲವು ಶಾಲೆಗಳಿವೆ. ಮಕ್ಕಳ ಕಲಿಕೆಗೂ ಬಾಂಗ್ ಕರೆ ಅಡಚಣೆಯಾಗುತ್ತಿದೆ ಎಂದು ಶುಕ್ಲ ಹೇಳಿದರು. ಲೌಡ್‍ಸ್ಪೀಕರಿನಲ್ಲಿ ಧಾರ್ಮಿಕ ವಿಷಯಗಳನ್ನು ಹೇಳುತ್ತಾರೆ. ಮಸೀದಿಗೆ ದೇಣಿಗೆ ಕೊಟ್ಟದ್ದನ್ನು ದೊಡ್ಡ ಧ್ವನಿಯಲ್ಲಿ ಹೇಳುತ್ತಾರೆ. ಇದು ವಿದ್ಯಾರ್ಥಿಗಳಿಗೂ ಹಿರಿಯ ನಾಗರಿಕರು ರೋಗಿಗಳಿಗೆ ತೊಂದರೆಯಾಗಿದೆ. ಜನಸಾಮಾನ್ಯರು ತೀವ್ರ ಶಬ್ದ ಮಾಲಿನ್ಯ ಎದುರಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಅಲಾಹಾಬಾದ್ ಹೈಕೋರ್ಟು ಆದೇಶ ಪ್ರಕಾರ ಮಸೀದಿಯ ಧ್ವನಿವರ್ಧಕಗಳ ಶಬ್ದದ ಮಿತಿ ನಿರ್ಣಯಿಸಲಾಗಿದೆ. ಅನವಶ್ಯಕ ಮೈಕ್‍ಗಳನ್ನು ತೆಗೆದು ಹಾಕಿಸಬೇಕೆಂದು ಸಚಿವರು ಆಗ್ರಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಅಲಾಹಾಬಾದ್ ಯುನಿವರ್ಸಿಟಿ ವೈಸ್ ಚಾನ್ಸಲರ್ ಸಂಗೀತಾ ಶ್ರೀವಾಸ್ತವ ಕೂಡ ಇಂತಹುದೇ ದೂರನ್ನು ನೀಡಿದ್ದರು. ಬೆಳಗ್ಗೆ ಮೈಕ್‍ನ ಬಾಂಗ್ ನಿದ್ದೆಗೆಡುವಂತೆ ಮಾಡುತ್ತಿದೆ. ದಿನಾಲೂ ತಲೆನೋವಿಗೆ ಕಾರಣವಾಗುತ್ತಿದೆ ಎಂಬುದಾಗಿ ಡಿಐಜಿ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು.