ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಸಾಲ ಪಾವತಿಗೆ ಮೊರಟೊರಿಯಂ ಘೋಷಿಸಿದ ಲಾಕ್ಡೌನ್ ಕಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋಟು ತಳ್ಳಿಹಾಕಿದ್ದು ಮರುಪಾವತಿಗೆ ಮೊರೊಟೊರಿಯಂ ಅವಧಿ ವಿಸ್ತರಣೆ, ಹೆಚ್ಚಿನ ವಿನಾಯಿತಿ ಕೊಡುವುದು ಇತ್ಯಾದಿ ಬೇಡಿಕೆಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಜಸ್ಟಿಸ್ ಅಶೋಕ್ ಭೂಷಣ್ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ಹೇಳಿದೆ. ಇದೇ ವೇಳೆ ಮೊರೊಟರಿಯಂ ಅವಧಿಯ ಬಡ್ಡಿಗೆ ಚಕ್ರ ಬಡ್ಡಿ, ದಂಡ ಬಡ್ಡಿ ಹೇರಬಾರದೆಂದು ಸುಪ್ರೀಂ ಕೋರ್ಟು ಆದೇಶಿಸಿದೆ.
ಠೇವಣಿ ಇಟ್ಟವರಿಗೆ, ನಿವೃತ್ತಿ ವೇತನ ಪಡೆಯುವವರಿಗೆ ಬ್ಯಾಂಕುಗಳು ಬಡ್ಡಿ ಕೊಡಬೇಕಾಗುತ್ತದೆ. ಸ್ವಂತ ನೆಲೆಯಲ್ಲಿ ಆಡಳಿತಾತ್ಮಕ ವೆಚ್ಚವೂ ಇದೆ. ಆದ್ದರಿಂದ ಲಾಕ್ಡೌನ್ ಕಾಲದ ಬಡ್ಡಿಯನ್ನು ಪೂರ್ಣವಾಗಿ ಮನ್ನಾ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿದೆ.
ಬ್ಯಾಂಕ್ ಸಾಲ ಮಾಡಿದವರಿಗೆ ಲಾಕ್ಡೌನ್ನಿಂದ ಹಣ ಮರುಪಾವತಿ ಸಾಧ್ಯವಾಗದು ಎಂದು ಕಳೆದ ವರ್ಷ ಮಾರ್ಚ್ ಒಂದರಿಂದ ಆಗಸ್ಟ್ 31ರವರೆಗೆ ಮರುಪಾವತಿಗೆ ಬ್ಯಾಂಕ್ ಮೊರೊಟರಿಯಂ(ತಡೆ)ಯನ್ನು ಘೋಷಿಸಿತ್ತು.
ಆದರೆ, ಎಂಟು ಬೇರೆ ಬೇರೆ ವಿಭಾಗಳಲ್ಲಿ ಎರಡು ಕೋಟಿಯವರೆಗೆ ಸಾಲಗಳಿಗೆ ಮಾತ್ರ ಮೊರೊಟರಿಯಂ ಕಾಲದ ಬಡ್ಡಿ ವಿನಾಯಿತಿ ನೀಡಲು ಕೇಂದ್ರ ಸರಕಾರ ನಿರ್ಧರಿದೆ. ಎರಡು ಕೋಟಿಗಿಂತ ಕಡಿಮೆ ಸಾಲವಿದ್ದವರಿಗೆ ಮಾತ್ರ ಬಡ್ಡಿಯಿಂದ ವಿನಾಯಿತ ಕೊಟ್ಟರೆ ಸಾಕು ಎಂಬ ನೀತಿ ಸರಿಯಲ್ಲ ಎಂದು ಸುಪ್ರೀಂಕೋರ್ಟು ಹೇಳಿದೆ. ಜೊತೆಗೆ ಸಮರ್ಥನೆಯೂ ಇಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿದೆ.












