ಮಾ.26ಕ್ಕೆ ರೈತರಿಂದ ಭಾರತ್ ಬಂದ್‌ಗೆ ಕರೆ: ವ್ಯಾಪಾರಿಗಳಿಂದ ಬೆಂಬಲ

0
875

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಂಯುಕ್ತ ಕಿಸಾನ್-ಮಜ್ದೂರ್ ಮೋರ್ಚಾ ಕೇಂದ್ರ ಸರಕಾರದ:ಕೃಷಿ ಕಾನೂನುಗಳನ್ನು ವಿರೋಧಿಸಿ ಮಾರ್ಚ್ 26ಕ್ಕೆ(ಶುಕ್ರವಾರ) ಭಾರತ ಬಂದ್ ಕರೆ ನೀಡಿದ್ದು ಇದನ್ನು ಯಶಸ್ವಿಗೊಳಿಸಲು ರೈತಸಂಘಟನೆಗಳು ತಯಾರಿ ಆರಂಭಿಸಿವೆ ಎಂಬುದಾಗಿ ವರದಿಯಾಗಿದೆ. ಭಾರತ ಬಂದ್ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಇರಲಿದೆ. ಜೊತೆಗೆ ಈ ಸಲ ಕಾಲಿ ಹೋಲಿಯನ್ನು ಆಚರಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಎಲ್ಲ ಟೋಲ್‍ಫ್ಲಾಝಾಗಳನ್ನು ಸಂಪೂರ್ಣ ಈ ದಿನ ಬಂದ್ ಮಾಡಿಸಲಾಗುವುದು ಎಂದು ರೈತ ಸಂಘಟನೆಗಳು ತೀರ್ಮಾನಿಸಿದ್ದಾರೆ.

ಆವಶ್ಯಕ ವಸ್ತುಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಇತರ ವಸ್ತುಗಳನ್ನು ಗ್ರಾಮದಿಂದ ನಗರಕ್ಕೆ ಕಳುಹಿಸದಂತೆ ನೋಡಿಕೊಳ್ಳಲಾಗುವುದು. ಬಂದ್ ಯಶಸ್ವಿಗೊಳಿಸಲು ವ್ಯಾಪಾರಿ ಸಂಘಟನೆಗಳು, ಜನಸಂಘಟನೆಗಳು, ಶಾಲಾ ಸಂಚಾಲಕರಲ್ಲದೆ ಇತರ ಸಂಘಟನೆಗಳಿಗೆ ಮನವಿ ಮಾಡಲಾಗಿದೆ. ರಿಕ್ಷಾ ಚಾಲಕರ ಸಂಘಟನೆ ಮತ್ತು ಆಟೋ ರಿಕ್ಷಾ ಚಾಲಕ ಸಂಘ ಕೂಡ ಬಂದ್‍ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.

ಹರಿಯಾಣದ ವ್ಯಾಪಾರಿಗಳು ಕೃಷಿ ಕಾನೂನು ವಿರೋಧಿ ರೈತ ಸಂಘಟನೆಗಳ ಭಾರತ ಬಂದ್ ಅನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ವ್ಯಾಪಾರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಗಾರ್ಗ್ ರೈತರ ಆಂದೋಲನವನ್ನು ವ್ಯಾಪಾರಿಗಳು ಬೆಂಬಲಿಸಲಿದ್ದಾರೆ. ಹೊಲದಲ್ಲಿ ಧಾನ್ಯ ಬೆಳೆದರೆ ಮಾತ್ರ ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಗಲಿದೆ. ಕೃಷಿ ಕಾನೂನು ರೈತರು, ಏಜೆಂಟುಗಳು ಮತ್ತು ಜನಸಾಮಾನ್ಯರ ಹಿತಕ್ಕೆ ವಿರೋಧಿಯಾಗಿದ್ದು ಕಂಪೆನಿಗಳು ಕೃಷಿ ಉತ್ಪನ್ನಗಳನ್ನು ಸ್ಟಾಕ್ ಮಾಡಿದರೆ ಕಾಳಸಂತೆ ಹೆಚ್ಚಬಹುದು. ಭ್ರಷ್ಟಾಚಾರ ಹೆಚ್ಚಳವಾಗಬಹುದು ಎಂದು ಹೇಳಿದ್ದಾರೆ.

ಕೃಷಿ ಕಾನೂನು ವಿರುದ್ಧ ದಿಲ್ಲಿಯ ಗಡಿಗಳಲ್ಲಿ ನಾಲ್ಕು ತಿಂಗಳಿನಿಂದ ರೈತರ ಸತ್ಯಾಗ್ರಹ ನಡೆಯುತ್ತಿದೆ. ರೈತರ ಬೇಡಿಕೆಯನ್ನು ಸರಕಾರ ನಿರಾಕರಿಸುತ್ತಿದೆ.