ಗುಲ್ಬರ್ಗಾ ವಿವಿಯ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 5ನೇ ಸೆಮಿಸ್ಟರ್ ಬರೆಯಲು ಅವಕಾಶ ಕೋರಿ ಎಸ್ ಐ ಓ ಮನವಿ

0
740

ಸನ್ಮಾರ್ಗ ವಾರ್ತೆ

ಕಲಬುರ್ಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಾಕಿ ಉಳಿದ ಪತ್ರಿಕೆಗಳೊಂದಿಗೆ ೫ನೇ ಸೆಮಿಸ್ಟರ್ ಪತ್ರಿಕೆಗಳ ಪರೀಕ್ಷೆಗಳನ್ನು ಸಹ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (ಎಸ್ ಐಓ) ಲಿಂಗಸುಗೂರು ನ ವತಿಯಿಂದ ಸಹಾಯಕ ಆಯುಕ್ತರವರ ಮುಖಾಂತರ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

ದಿನಾಂಕ 30/03/2021ರಂದು ಗುಲ್ಬರ್ಗ ವಿಶ್ವ ವಿದ್ಯಾಲಯವು ಹೊರಡಿಸಿದ ಸುತ್ತೋಲೆಯ ಪ್ರಕಾರ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳಲ್ಲಿ ಈ ಹಿಂದಿನ ಮೊದಲ ಸಮಿಸ್ಟರನಲ್ಲಿ ಅನುತ್ತೀರ್ಣರಾಗಿ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಈ ವರ್ಷದ ಐದನೇ ಸಮಿಸ್ಟರ್ ಪರೀಕ್ಷೆಯನ್ನು ಬರೆಯಲು ಅನುಮತಿಸುವುದಿಲ್ಲ ಎಂದು ತಿಳಿಸಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಪೂರಕವಲ್ಲ. ಈ ಸುತ್ತೋಲೆಯಲ್ಲಿ ವಿಶ್ವ ವಿದ್ಯಾಲಯವು 2018-19ರ ಶೈಕ್ಷಣಿಕ ವರ್ಷದಿಂದ ಯುಜಿಸಿಯ ಸಿಬಿಸಿಎಸ್ ಪಠ್ಯಕ್ರಮವನ್ನು ಅಳವಡಿಸಿಕೊಂಡಿದೆ. ಅದರಂತೆ ಈ ಪಠ್ಯಕ್ರಮದ ನಿಯಮಾವಳಿಗಳ ಪ್ರಕಾರ 12.9ರಲ್ಲಿ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಯು ಒಂದನೇ ಸೆಮಿಸ್ಟರ್ ನ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾಗಿರಬೇಕು. ಮೇಲೆ ತಿಳಿಸಿದ ನಿಯಮಗಳನ್ನು ವಿಶ್ವವಿದ್ಯಾಲಯವು ದಿನಾಂಕ 16-01-2019ರಲ್ಲಿ ಅಧಿಸೂಚನೆ ಹೊರಡಿಸಿದ್ದು, ಅಂದಿನಿಂದ ವಿಶ್ವವಿದ್ಯಾಲಯವು ಸಿಬಿಸಿಎಸ್ ಪಠ್ಯಕ್ರಮವನ್ನು ಅಳವಡಿಸಿಕೊಂಡು ಜಾರಿಗೊಳಿಸುವುದಾಗಿ ತಿಳಿಸಿತ್ತು. ಆದರೆ ಈ ಹೊಸ ಪಠ್ಯಕ್ರಮ ನಿಯಮಗಳು ಅನ್ವಯವಾಗಿರುವುದನ್ನು ಮಹಾವಿದ್ಯಾಲಯಗಳು ಇಚ್ಛಾಶಕ್ತಿ ಕೊರತೆಯಿಂದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಾಗಿತ್ತು. ಇದ್ಯಾವುದೂ ಪ್ರವೇಶಾತಿ ಪಡೆಯುವಾಗಲೂ ನಡೆಯಲಿಲ್ಲ ಎಂಬುದು ಶೋಚನೀಯ ಎಂದು ಎಸ್.ಐ.ಓ. ಮನವಿಯಲ್ಲಿ ಹೇಳಿದೆ.

ಇದರ ಕುರಿತು ವಿಶ್ವವಿದ್ಯಾಲಯವು ಮಹಾವಿದ್ಯಾಲಯಗಳಿಂದ ಹೊಸ ಪಠ್ಯಕ್ರಮದ ನಿಯಮಾವಳಿಗಳನ್ನು ತಲುಪಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಆದರೆ ಇದ್ಯಾವುದನ್ನೂ ಕ್ರಮಬದ್ದವಾಗಿ ಪಾಲನೆ ಮಾಡದೆ ಮತ್ತು ಪರೀಕ್ಷಾ ಅರ್ಜಿ ತುಂಬುವ ಸಮಯದಲ್ಲಿ ವಿದ್ಯಾರ್ಥಿ ಪೋರ್ಟಲ್ ನಲ್ಲಿ ಬಾಕಿ ಉಳಿದ ಪತ್ರಿಕೆಗಳ ಜೊತೆಗೆ 5ನೇ ಸೆಮಿಸ್ಟರ ಪರೀಕ್ಷಾ ಶುಲ್ಕವನ್ನು ತುಂಬಲು ಅವಕಾಶ ನೀಡಿ ಇಧೀಗ ಪರೀಕ್ಷೆ ಬರೆಯಲು ನಿಯಮಾವಳಿಗಳ ಪ್ರಕಾರ ಅವಕಾಶ ಇಲ್ಲ ಎಂಬುದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟು ಮಾಡಿದೆ. ಪರೀಕ್ಷೆ ಹತ್ತಿರವಿರುವ ಸಮಯದಲ್ಲಿ ದಿಢಿರನೇ ಈ ರೀತಿಯ ಸುತ್ತೋಲೆಯನ್ನು ಹೊರಡಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುವ ಬೇಜವಾಬ್ದಾರಿತನದ ಹೇಳಿಕೆಯು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ತಿಳಿಸಿರುವ ಎಸ್.ಐ.ಓ., ಬಹುತೇಕ ವಿದ್ಯಾರ್ಥಿಗಳು ರೆಗ್ಯುಲರ್ ಮತ್ತು ರೀಪಿಟರ್ ಪತ್ರಿಕೆಗಳ ಪರೀಕ್ಷಾ ಶುಲ್ಕವನ್ನು ತುಂಬಿದ್ದು ಅದರಂತೆ ವಿದ್ಯಾರ್ಥಿಗಳೆಲ್ಲರೂ ಪರೀಕ್ಷಾ ಸಿದ್ದತೆಯಲ್ಲಿ ತೊಡಗಿದ್ದಾರೆ. ದಿಢೀರನೆ ಈಗ ಅವರಿಗೆ 1ನೇ ಸೆಮಿಸ್ಟರ್ ನ ವಿಷಯಗಳು ಬಾಕಿ ಉಳಿದುಕೊಂಡ ಕಾರಣಕ್ಕಾಗಿ ಅವರನ್ನು 5ನೇ ಸೆಮಿಸ್ಟರ ಪರೀಕ್ಷೆಯನ್ನು ಬರೆಯಲು ಅನುಮತಿಸುವುದಿಲ್ಲ ಎಂಬ ಹೇಳಿಕೆಯು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ಹೇಳಿದೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಇದೀಗ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಇದರಿಂದ ಅನೇಕ ವಿದ್ಯಾರ್ಥಿಗಳು ಪದವಿ ಕೋರ್ಸನ್ನು ಅರ್ಧಕ್ಕೆ ಮೊಟುಕುಗೊಳಿಸುವ ಸಂಭವವಿದೆ. ಆದ್ದರಿಂದ ಈ ಹಿಂದಿನ ವರ್ಷಗಳಲ್ಲಿ ಬಾಕಿ ಉಳಿಸಿಕೊಂಡ ವಿಷಯಗಳ ಜೊತೆ ರೆಗ್ಯುಲರ್ 5ನೇ ಸೆಮಿಸ್ಟರ್ ಪತ್ರಿಕೆಗಳನ್ನು ಸಹ ಬರೆಯಲು ಅವಕಾಶ ನೀಡಬೇಕೆಂದು ಎಸ್.ಐ.ಓ ಲಿಂಗಸೂಗೂರು ಕುಲಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.

ಕುಲಪತಿಗಳಿಗೆ ಸಲ್ಲಿಸಿದ ಮನವಿಯನ್ನು ಸಹಾಯಕ ಆಯುಕ್ತರ ಪರವಾಗಿ ಸಿಬ್ಬಂದಿ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಎಸ್ ಐ ಓ ಲಿಂಗಸೂಗೂರ ಘಟಕ ಅಧ್ಯಕ್ಷ ಶೈಖ್ ಆಫ್ರಿದ್, ಕಾರ್ಯದರ್ಶಿ ಅಲ್ಲಾ ಭಕ್ಷ್ ಅಮೀರ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ನಯೀಮ್, ವಿದ್ಯಾರ್ಥಿಗಳಾದ ಮಂಜುನಾಥ, ಅಶೋಕ್, ಸೊಹೈಲ್, ಶೌಕತ್,ಚಂದ್ರು, ರಮೇಶ್ ಉಪಸ್ಥಿತರಿದ್ದರು.