ಕೇಂದ್ರದ ‘ಸಾಗರ ಮಾಲಾ’ ಯೋಜನೆ ವಿರೋಧಿಸಿ ನಾಳೆ ಬೆಂಗರೆ ಸಂಪೂರ್ಣ ಬಂದ್: ಪ್ರತಿಭಟನೆಗೆ ಸಿದ್ಧರಾದ ನಾಗರಿಕರು

0
1277

ಸನ್ಮಾರ್ಗ ವಾರ್ತೆ

ಮಂಗಳೂರು: ಕೇಂದ್ರ ಸರಕಾರವು ಬೆಂಗೆರೆ ಪ್ರದೇಶವನ್ನು ಖಾಸಗೀಕರಣ ಮಾಡಿ ಕೋಸ್ಟಲ್ ಬರ್ತ್, ಸಾಗರಮಾಲಾ ಯೋಜನೆ ಮೂಲಕ ಕಾರ್ಪೊರೇಟ್ ಗುತ್ತಿಗೆದಾರರಿಗೆ ನೀಡಿ ಬೆಂಗರೆ ಪ್ರದೇಶವನ್ನು ಇಲ್ಲದಾಗಿಸುವುದನ್ನು ವಿರೋಧಿಸಿ ನಾಳೆ (ಎ. 5, 2021 ಸೋಮವಾರ) ಬೆಂಗರೆ ಸಂಪೂರ್ಣ ಬಂದ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಶಾಂತಿಯುತ ಪ್ರತಿಭಟನಾ ಸಭೆಯನ್ನು ಊರ ನಾಗರಿಕರು ಹಮ್ಮಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರದೇಶದಿಂದ ಯಾವುದೇ ಸಾಮಾನ್ಯ ಬೋಟು, ಜನರನ್ನು ಸಾಗಿಸುವ ಫೇರಿ ಬೋಟು, ಸಣ್ಣ ಸಣ್ಣ ಬೋಟುಗಳ ಸಂಚಾರವನ್ನು ಸಂಜೆ 6 ಗಂಟೆಯವರೆಗೆ ಸಂಪೂರ್ಣವಾಗಿ ಸ್ಥಗಿತಗೊಗೊಳ್ಳಲಿದೆ. ಊರ ನಾಗರಿಕರ ವಿರೋಧದ ಮಧ್ಯೆಯೂ ಪೋಲೀಸರ ಬೆಂಗಾವಲಿನಲ್ಲಿ ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಬೃಹತ್ ಶಾಂತಿಯುತ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿದು ಬಂದಿದೆ.

ಬೆಂಗರೆ ಬಂದ್ ಗೆ ಸ್ಥಳೀಯ ವ್ಯಾಪಾರಸ್ಥರು, ಆಟೋ ಚಾಲಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ನಾಳೆ ಯಾವುದೇ ಸೇವೆ ಲಭ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಊರ ನಾಗರಿಕರು ಸೇರಿಕೊಂಡು ಸಾಗರಮಾಲಾ ಯೋಜನೆ ಆರಂಭಿಸುವ ಸ್ಥಳದಲ್ಲಿಯೇ ಬೃಹತ್ ಶಾಂತಿಯುತ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಊರ ನಾಗರಿಕರು ಒಗ್ಗೂಡಿ ಕೋಸ್ಟಲ್ ಬರ್ಥ್ ಹೋರಾಟ ಸಮಿತಿ ಎಂಬ ಸಮಿತಿಯನ್ನು ಹುಟ್ಟುಹಾಕಿದ್ದು, ಇದರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸರಕಾರ ನಮ್ಮ ಅಹವಾಲನ್ನು ಕೇಳಬೇಕು. ಸಾಗರಮಾಲಾ ಯೋಜನೆಯಿಂದ ಇಡೀ ಬೆಂಗರೆ ಪ್ರದೇಶವೇ ಕಣ್ಮರೆಯಾಗಬಹುದು. ಸಾಗರ ಮಾಲಾ ಯೋಜನೆಯಿಂದ ಮೀನುಗಾರಿಕೆ ಗೆ ದೊಡ್ಡ ಹೊಡೆತ ಬೀಳಲಿದೆ. ಹಲವಾರು ನಿವಾಸಿಗಳು ನಿರ್ಗತಿಕರಾಗುತ್ತಾರೆ. ಆದ್ದರಿಂದ ಈ ಯೋಜನೆಯನ್ನು ಕೈ ಬಿಡುವವರೆಗೆ ಹೋರಾಟ ಮುಂದುವರೆಸುತ್ತೇವೆ. ಈ ಯೋಜನೆಯ ಬದಲು ಬೆಂಗರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಊರ ನಾಗರಿಕರು ಆಗ್ರಹಿಸಿದ್ದಾರೆ.