ಮಂಜೇಶ್ವರದಲ್ಲಿ ಎ.ಕೆ.ಎಂ ಅಶ್ರಫ್ ವಿಜಯ ನಿಶ್ಚಿತ: ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್

0
775

ಸನ್ಮಾರ್ಗ ವಾರ್ತೆ

ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ವ್ಯಾಪ್ತಿಯ ಮೂಲೆ ಮೂಲೆಯಲ್ಲೂ ಜನಪರ ಸೇವೆಯೊಂದಿಗೆ ಜನಪ್ರಿಯರಾದ ಯು.ಡಿ.ಎಫ್.ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ , ಮಂಜೇಶ್ವರದ ಸಪ್ತ ಭಾಷಿಗರ ಸರ್ವ ಸಮ್ಮತದ ಪ್ರತಿನಿಧಿಯಾಗಿ ಪ್ರಚಂಡ ವಿಜಯ ಸಾಧಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಮಂಜೇಶ್ವರ ಕ್ಷೇತ್ರದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರು ಅಶ್ರಫ್ ರವರ ಅಭ್ಯರ್ಥಿತನವನ್ನು ಇಷ್ಟ ಪಟ್ಟಿರುವುದು ಕಂಡು ಬಂತು ಎಂದು ಹೇಳಿರುವ ಫಾರೂಕ್ ಉಳ್ಳಾಲ್ , ಇದೇ ಮೊದಲ ಬಾರಿಗೆ ಮಂಜೇಶ್ವರದ ಮಣ್ಣಿನ ಮಗ, ಕ್ರಿಯಾಶೀಲ ಯುವ ನಾಯಕ ಅಶ್ರಫ್ ರವರಿಗೆ ಯು.ಡಿ.ಎಫ್ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಪಕ್ಷಾತೀತವಾಗಿ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಯು.ಡಿ.ಎಫ್ ಒಕ್ಕೂಟದ ಸದಸ್ಯ ಪಕ್ಷಗಳ ಮುಖಂಡರುಗಳಾದ ಕಾಸರಗೋಡು ಜಿಲ್ಲಾ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ.ಎ.ಅಬ್ದುಲ್ಲ, ಕೇರಳ ರಾಜ್ಯ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಅಶ್ರಫ್ ಅಲಿ, ಮಂಜೇಶ್ವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಿ.ಎಂ.ಕೆ. ಮುಹಮ್ಮದ್, ಐಯುಎಂಎಲ್ ಜಿಲ್ಲಾ ಉಪಾಧ್ಯಕ್ಷ ವಿಕೆಪಿ ಹಮೀದಾಲಿ, ಕಾರ್ಯದರ್ಶಿ ಮುಹಮ್ಮದ್ ಅಸ್ಲಂ, ಉದ್ಯಮಿ ಲತೀಫ್ ಉಪ್ಪಳ ಗೇಟ್, ಆರ್ .ಎಸ್.ಪಿ. ಪಕ್ಷದ ಜಿಲ್ಲಾಕಾರ್ಯದರ್ಶಿ ಕರಿವಿತ್ತೂರು ವಿಜಯನ್, ಜಬ್ಬಾರ್ ಉಪ್ಪಳ ಮುಂತಾದವರ ಕಂಡು ಮಾತನಾಡಿಸಿದಾಗಲೂ ಕಳೆದ ಉಪ ಚುನಾವಣೆಗಿಂತಲೂ ಹೆಚ್ಚಿನ ಬಹುಮತದಲ್ಲಿ ಯು.ಡಿ.ಎಫ್. ಅಭ್ಯರ್ಥಿ ಎಕೆಎಂ ಅಶ್ರಫ್ ಚುನಾಯಿತರಾಗುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ ಎಂದೂ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.