ಮತ್ತೆ ಮತ್ತೆ ಹೆಚ್ಚುತ್ತಿರುವ ಕೊರೋನಾ: ಮಹಾರಾಷ್ಟ್ರದಲ್ಲಿ ಇನ್ಮುಂದೆ ವಾರಾಂತ್ಯದಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್

0
712

ಸನ್ಮಾರ್ಗ ವಾರ್ತೆ

ಮುಂಬೈ: ಮತ್ತೆ ಮತ್ತೆ ಹೆಚ್ಚುತ್ತಿರುವ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಹಿನ್ನೆಲೆಯಲ್ಲಿ ಇನ್ಮುಂದೆ ವಾರಾಂತ್ಯದಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಹೇರಿಕೆಗೆ ಮಹಾರಾಷ್ಟ್ರ ಸರಕಾರ ತೀರ್ಮಾನಿಸಿದೆ. ರಾತ್ರಿ ಕರ್ಫ್ಯೂ ಜೊತೆಗೆ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7 ರವರೆಗೆ “ಕಟ್ಟುನಿಟ್ಟಾದ ಲಾಕ್ ಡೌನ್” ಸೇರಿದಂತೆ ಹೊಸ ನಿರ್ಬಂಧಗಳನ್ನು ಮಹಾರಾಷ್ಟ್ರ ಸರಕಾರ ಪ್ರಕಟಿಸಿದೆ.

ನಾಳೆಯಿಂದ ಜಾರಿಗೆ ಬರುವ ನಿಯಮಗಳಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ಕರ್ಫ್ಯೂ ಇರುತ್ತದೆ. ದಿನವಿಡೀ ಐದು ಅಥವಾ ಅದಕ್ಕಿಂತ ಹೆಚ್ಚು ಕೂಟಗಳನ್ನು ನಿಷೇಧಿಸುವುದು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಪೂಜಾ ಸ್ಥಳಗಳನ್ನು ಮುಚ್ಚಲಾಗುವುದು ಹಾಗೂ ಅಗತ್ಯ ಸೇವೆಗಳಿಗೆ ಅನುಮತಿಸಲಾಗುವುದು ಎಂದು ಸರಕಾರ ಹೇಳಿದೆ.

ಕೈಗಾರಿಕಾ ಚಟುವಟಿಕೆಗಳು, ನಿರ್ಮಾಣ ಕಾಮಗಾರಿ, ತರಕಾರಿ ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ನಿಯಮಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ವಾರಾಂತ್ಯದಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಹೇರಿಕೆ ಮಾಡಲಾಗುವುದು ಎಂದು ತಿಳಿಸಿದ್ದು, ಸಂಚಾರಕ್ಕೆ ಯಾವುದೇ ಹೊಸ ನಿರ್ಬಂಧಗಳಿಲ್ಲ. ಆದರೆ ಸಾರ್ವಜನಿಕ ಸಾರಿಗೆ ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುವಂತೆ ತಿಳಿಸಿದೆ.

ರಾಜ್ಯದಲ್ಲಿ ಕರೋನ ವೈರಸ್ ಪ್ರಕರಣಗಳಲ್ಲಿನ ಹೆಚ್ಚಳವನ್ನು ಎದುರಿಸಲು ಎರಡನೇ ಲಾಕ್‌ಡೌನ್ ಅನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ ಎರಡು ದಿನಗಳ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಪರಿಸ್ಥಿತಿ ಕುರಿತು ಚರ್ಚಿಸಲು ಸಂಪುಟ ಸಭೆ ನಡೆಸಿದ ನಂತರ ಈ ನಿರ್ಧಾರಗಳನ್ನು ತೆಗೆದಿದೆ.

ಮಹಾರಾಷ್ಟ್ರದಲ್ಲಿ ಶನಿವಾರ ಸುಮಾರು 50,000 ಹೊಸ ಪ್ರಕರಣಗಳು ವರದಿಯಾಗಿತ್ತು. ಕೇಂದ್ರದ ಪ್ರಕಾರ, ಭಾರತದ ಅತ್ಯಂತ ಹೆಚ್ಚು ಕೊರೋನಾ ಪೀಡಿತ ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳು ಮಹಾರಾಷ್ಟ್ರ ರಾಜ್ಯದವು.