ಮೊಬೈಲ್ ರಿಪೇರಿಗೆ ಕೊಟ್ಟಾಗ ದೊರೆತ ವೀಡಿಯೋ ಸುಳಿವು: ವರ್ಷದ ಹಿಂದೆ ಆತ್ಮಹತ್ಯೆಗೈದ ಬಾಲಕನ ಪ್ರಕರಣ ಮತ್ತೆ ಬೆಳಕಿಗೆ

0
8029

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್: ಕಳೆದ ವರ್ಷ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ವಿಚಿತ್ರ ತಿರುವು ದೊರಕಿರುವ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ನಾದಾಪುರಂ ನರಿಕಟ್ಟೇರಿಯಲ್ಲಿ ನಡೆದಿದೆ.

ಮೊಬೈಲ್ ರಿಪೇರಿಗೆ ಕೊಟ್ಟ ಬಳಿಕ ಮೊಬೈಲ್ ನಲ್ಲಿ ದೊರೆತ ವೀಡಿಯೋ ಆಧಾರದ ಮೇಲೆ ನಾದಾಪುರಂನ ನರಿಕಟ್ಟೇರಿಯಲ್ಲಿ ನಡೆದಿದ್ದ ಅಪ್ರಾಪ್ತ ವಯಸ್ಕನ ಸಾವಿನ ಬಗ್ಗೆ ಮರು ಪರಿಶೀಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ವೀಡಿಯೋ ಹೊರಬಿದ್ದ ನಂತರ ಮೃತನನ್ನು ಕುಟುಂಬದ ಸದಸ್ಯನೇ ದೈಹಿಕವಾಗಿ ಹಿಂಸಿಸುತ್ತಿರುವ ದೃಶ್ಯ ಬಹಿರಂಗಗೊಂಡಿದೆ. ಸದ್ಯ ಆ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಪೆರೋಡ್‌ನ ಎಂಐಎಂ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ಅಝೀಝ್ ಕಟ್ಟರಥ್ (16) 2020 ರ ಮೇ 5 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಅಝೀಝ್ ತನ್ನ ತಂದೆಯ ಮೊದಲ ಪತ್ನಿಯ ಮಗ.‌ ಅಝೀಝ್ ನ ತಾಯಿ ತೀರಿ ಹೋದ ಬಳಿಕ ಮಲತಾಯಿ, ಸಹೋದರ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದನು.

ಅಝೀಝ್ ನ ಮರಣದ ನಂತರ, ಸ್ಥಳೀಯ ನಿವಾಸಿಗಳು ಮತ್ತು ಅವನ ತಾಯಿಯ ಸಂಬಂಧಿಕರು ಇದು ಕೊಲೆ ಪ್ರಕರಣ ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿದ್ದ ನಾದಾಪುರಂ ಪೊಲೀಸರು ಅದನ್ನು ತನಿಖೆಯ ಆರಂಭಿಕ ಹಂತದಲ್ಲಿಯೇ ಜಿಲ್ಲಾ ಅಪರಾಧ ಶಾಖೆಗೆ ಒಪ್ಪಿಸಿದ್ದರು.

ಬಾಲಕ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಮತ್ತು ದೈಹಿಕ ಹಲ್ಲೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣಕ್ಕೆ ಅಂತ್ಯ ಹಾಡಿದ್ದರು.

ಈ ಘಟನೆ ನಡೆದು ಒಂದು ವರ್ಷಗಳ ನಂತರ ಮೊಬೈಲ್ ರಿಪೇರಿಗೆಂದು ಕೊಟ್ಟ‌ ಬಳಿಕ ಮೊಬೈಲ್ ನಲ್ಲಿ ಮೃತಪಟ್ಟ ಬಾಲಕನಿಗೆ ಆತನ ಮಲತಾಯಿಯ ಮಗ ದೈಹಿಕವಾಗಿ ಹಿಂಸಿಸುತ್ತಿರುವ ಎರಡು ನಿಮಿಷದ ವೀಡಿಯೋ ದೊರೆತಿದ್ದು, ಆ ವೀಡಿಯೋ ಊರಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ಆದ ಬಳಿಕ ಕೊಲೆ ಎಂದು ಸಂಶಯಿಸುತ್ತಿದ್ದ ಊರಿನವರಿಗೆ ಆಧಾರ ದೊರೆತಂದದ್ದಾರಿಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಆರೋಪಿ ಮಲತಾಯಿ ಮಗನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ವಿಡಿಯೋವನ್ನು ಅಝೀಝ್ ಮಲತಾಯಿಯ ಮಗಳು(ಆತನಿಗೆ ಸಹೋದರಿ) ಚಿತ್ರೀಕರಿಸಿದ್ದಾಳೆ. ವೀಡಿಯೋದಲ್ಲಿ ಮೃತ ಬಾಲಕ ಅಝೀಝ್ ನ ಮಲ ಸಹೋದರ ಆತನೊಂದಿಗೆ ಜಗಳವಾಡುತ್ತಾ ಕತ್ತನ್ನು ಒತ್ತಿ ಹಿಡಿದಿದ್ದರಿಂದ ಅಝೀಝ್ ಉಸಿರಾಡಲು ಕಷ್ಟ ಪಡುತ್ತಿರುವ ದೃಶ್ಯ ದಾಖಲಾಗಿದೆ.

ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಶವಪರೀಕ್ಷೆ ನಡೆಸಿದ್ದರು. ಆದರೆ ಮರಣೋತ್ತರ ವರದಿಯಲ್ಲಿ ಕೊಲೆಯ ಯಾವುದೇ ಸೂಚನೆಗಳನ್ನು ನೀಡಿರಲಿಲ್ಲ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ. ಶ್ರೀನಿವಾಸನ್ ಹೇಳಿದ್ದಾರೆ. ಆದರೆ, ವಿಡಿಯೋ ಹೊರ‌ ಬಂದ ನಂತರ ಪೊಲೀಸರು ಸಂಪೂರ್ಣ ತನಿಖೆ ನಡೆಸಲಿದ್ದಾರೆ. ನ್ಯಾಯಾಲಯದ ಅನುಮೋದನೆಯೊಂದಿಗೆ, ಪ್ರಕರಣವನ್ನು ಮರು ತನಿಖೆ ಮಾಡಲಾಗುವುದು ಎಂದವರು ಹೇಳಿದರು.

ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಜಿಲ್ಲಾ ಅಪರಾಧ ವಿಭಾಗ ಡಿವೈಎಸ್ಪಿ ಶಾಜು ಜೋಸ್‌ಗೆ ನಿರ್ದೇಶಿಸಲಾಗಿದೆ.

ಈತನ್ಮಧ್ಯೆ, ಶುಕ್ರವಾರ ರಾತ್ರಿ ಆರೋಪಿಗಳ ಮನೆಯ ಮುಂದೆ ಆಕ್ರೋಶಗೊಂಡಿದ್ದ ಊರಿನ ಜನರು ಗುಂಪು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಕೊಲೆ ಎಂಬ ಅನುಮಾನ‌ ಮೊದಲಿನಿಂದಿದ್ದರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ನಿಜವಾದ ಅಪರಾಧಿಗಳನ್ನು ಕಂಡುಹಿಡಿಯಲಿಲ್ಲ ಎಂದು ಊರವರು ಪೊಲೀಸರನ್ನು ದೂಷಿಸಿದ್ದಾರೆ.

Video Courtesy: Media One Kerala