ರಸ್ತೆ ಮಧ್ಯೆ ಅಪಘಾತವಾಗಿ ರಕ್ತದ ಮಡುವಿನಲ್ಲಿದ್ದ ವೈದ್ಯ: ಸಕಾಲಕ್ಕೆ ನೆರವು ನೀಡದೆ ನಿರ್ಲಕ್ಷ್ಯ ತೋರಿದ ತರೀಕೆರೆ ಶಾಸಕ‌ ಸುರೇಶ್; ಆರೋಪ

0
791

ಕರ್ತವ್ಯಕ್ಕೆ ಹಾಜರಾಗದೆ ಕುಡಿದು ವಾಹನ ಚಾಲನೆ: ಶಾಸಕ‌

ಸನ್ಮಾರ್ಗ ವಾರ್ತೆ

ಚಿಕ್ಕಮಗಳೂರು: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಕ್ತದ ಮಡುವಿನಲ್ಲಿದ್ದ ಬಿದ್ದಿದ್ದ ವೈದ್ಯರೋರ್ವರನ್ನು ನೋಡಿಯೂ ತರೀಕೆರೆ ಶಾಸಕ‌ ಸುರೇಶ್ ರವರು ಸಕಾಲಕ್ಕೆ ನೆರವು ನೀಡದೆ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕೇಳಿಬಂದಿದ್ದು, ಶಾಸಕರ ಈ ಅಮಾನವೀಯ ನಡೆಯಿಂದ ವೈದ್ಯರೋರ್ವರು ರಸ್ತೆಯಲ್ಲೇ ಪ್ರಾಣ ಬಿಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ನಡೆದಿದೆ. ಆದರೆ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ವೈದ್ಯ ಕರ್ತವ್ಯಕ್ಕೆ ಹಾಜರಾಗದೆ ಕುಡಿದು ಬಂದು ವಾಹನ ಚಲಾಯಿಸುತ್ತಿದ್ದ ಎಂದು ಹೇಳಿದ್ದಾರೆ.

ಹಿರಿಯ ಆರೋಗ್ಯಾಧಿಕಾರಿ ಡಾ.ರಮೇಶ್ ಕುಮಾರ್ ಎಂಬವರಿಗೆ ಲಕ್ಕವಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ವೇಳೆ ತೀವ್ರ ಗಾಯಗೊಂಡು ರಕ್ತದ ಮಡುವಲ್ಲೇ ಅರ್ಧ ತಾಸಿಗೂ ಹೆಚ್ಚುಕಾಲ ಒದ್ದಾಟ ನಡೆಸುತ್ತರೂ ಅಲ್ಲೇ ಕಾರು ನಿಲ್ಲಿಸಿದ್ದ ಶಾಸಕ‌ ಡಿ.ಎಸ್. ಸುರೇಶ್ ಕಾರಿನಿಂದ ಕೆಳಗಿಳಿಯಲೇ ಇಲ್ಲವೆಂಬ ಆರೋಪ ಕೇಳಿ ಬಂದಿದೆ. ಆಂಬುಲೆನ್ಸ್ ಬರುವ ಮೊದಲು ವೈದ್ಯರನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ಯುವಂತಹ ಮಾನವೀಯತೆ ತೋರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಆಂಬುಲೆನ್ಸ್ ಬಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಡಾ.ರಮೇಶ್ ಕುಮಾರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತರೀಕೆರೆ ಶಾಸಕ‌ ಡಿ.ಎಸ್. ಸುರೇಶ್ ಪ್ರತಿಕ್ರಿಯೆ:
ತರೀಕೆರೆ ತಾಲೂಕು ಲಕ್ಕವಳ್ಳಿ ಸಮೀಪ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸಿಬ್ಬಂದಿ ಸ್ಪಂದಿಸಿದ್ದಾರೆ ಎಂದು ಶಾಸಕ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ಅಪಘಾತಕ್ಕೆ ಒಳಗಾದ ವೈದ್ಯ ಕರ್ತವ್ಯಕ್ಕೆ ಹಾಜರಾಗದೆ ತೋಟದಲ್ಲಿ ಕುಡಿದು ಬಂದು ವಾಹನ ಚಲಾಯಿಸುತ್ತಿದ್ದುದು ತನಿಖೆಯಿಂದ ಸಾಬೀತು ಆಗಿದೆ ಎಂದಿದ್ದಾರೆ. ತನಗೆ ಕಣ್ಣು ಬೇನೆ ಇದ್ದು’ ಚಿಕಿತ್ಸೆ ಪಡೆದು ಔಷಧಿ ಮಾತ್ರೆ ಸೇವಿಸಿದ್ದೆ. ಹೀಗಾಗಿ ನಿದ್ದೆಗೆ ಜಾರಿದ್ದೆ ಎಂದು ಹೇಳಿದ್ದಾರೆ ಅಪಘಾತ ಗಮನಿಸಿದ ತನ್ನ ಸಿಬ್ಬಂದಿ ಸ್ಪಂದಿಸಿದ್ದು ತಕ್ಷಣ ಆ್ಯಂಬುಲೆನ್ಸ್ ಬಂದು ಗಾಯಾಳುವನ್ನು ಕರೆದೊಯ್ದಿದೆ ಎಂದಿದ್ದಾರೆ. ನೋವಿಗೆ ಸ್ಪಂದಿಸುವ ಬದಲು ಯಾರೋ ಕಿಡಿಗೇಡಿಗಳು ವೀಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.