ಸನ್ಮಾರ್ಗ ವಾರ್ತೆ
ಮಂಗಳೂರು: ಕರ್ನಾಟಕ ಮುಸ್ಲಿಮ್ ಜಮಾಅತ್ನಿಂದ ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ‘ಸಹಾಯ್ ಆ್ಯಂಬುಲೆನ್ಸ್’ನ್ನು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭ ಆ್ಯಂಬುಲೆನ್ಸ್ನ ಕೀ ಹಸ್ತಾಂತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ಸಮಾಜ ಸೇವೆಗೆ ವಿನಿಯೋಗಿಸಿಕೊಂಡಿರುವ ಕೆಸಿಎಫ್ನ ಕಾರ್ಯ ಪ್ರಶಂಸನೀಯ. ಜನ ಸೇವೆಗೆಂದು ಆ್ಯಂಬುಲೆನ್ಸ್ ನೀಡುತ್ತಿರುವುದು ಮಾದರಿ ಕೆಲಸವಾಗಿದೆ. ಜಿಲ್ಲೆಯ ಪರವಾಗಿ ಕೆಸಿಎಫ್ಗೆ ಧನ್ಯವಾದ ಎಂದು ಹೇಳಿದರು.
ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ.ಶೇಕ್ ಬಾವಾ ಮಾತನಾಡಿ, ಕೆಸಿಎಫ್ ಒಮಾನ್ ನೇತೃತ್ವದ ಸೇವೆಯಲ್ಲಿ ಇದು 10ನೇ ಆ್ಯಂಬುಲೆನ್ಸ್ ಆಗಿದೆ. ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕಿಗೆ ಆ್ಯಂಬುಲೆನ್ಸ್ ವೊಂದನ್ನು ಸೇವೆಗಾಗಿ ನೀಡಲಿದ್ದೇವೆ. ಸಂಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡಲಾಗುವುದು.
ಸಂಘಟನೆಯು ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸೇವೆ ನೀಡಲು ಸದಾ ಸಿದ್ಧವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಮಾಜಿ ಶಾಸಕ ಮೊಯ್ದಿನ್ ಬಾವ, ಕೆಎಂಜೆ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಲ್ತಾಝ್ ಅಲಿ, ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಖಾಝಿ ಖುರತುಸ್ಸಾದಾತ್ ಕೂರತ್ ತಂಬಳ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಹಝ್ರತ್ ಮುಹಮ್ಮದ್ ಫಾಝಿಲ್ ರಝಿ ಕಾವಳಕಟ್ಟೆ ಶುಭ ಹಾರೈಸಿದರು.
ಈ ಸಂದರ್ಭ ಸುನ್ನೀ ಕೊ ಆರ್ಡಿನೇಶನ್ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಸಹಾಯ್ ಎಲೈಟ್ ಅಲೈಯನ್ಸ್ ಚೇರ್ಮ್ಯಾನ್ ಡಾ.ಯು.ಟಿ.ಇಫ್ತಿಕಾರ್, ಕೆಸಿಎಫ್ ಒಮಾನ್ ನಿರ್ದೇಶಕ ಉಮರ್ ಸಖಾಫಿ ಮಿತ್ತೂರು, ಕೆಎಂಜೆ ಮಂಗಳೂರು ತಾಲೂಕು ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮತ್ತಿತರರು ಭಾಗವಹಿಸಿದ್ದರು. ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.














