ಸನ್ಮಾರ್ಗ ವಾರ್ತೆ
ಮ್ಯಾಡ್ರಿಡ್: ಆಂಟಿ ವೈರಸ್ ಸಾಫ್ಟ್ ವೇರ್ ಸ್ಥಾಪಕ, ವಿವಾದಾತ್ಮಕ ವ್ಯಕ್ತಿಯೂ ಆದ ಜಾನ್ ಡೆವಿಡ್ ಮಕಾಫಿ ಸ್ಪೈನಿನ ಜೈಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಇವರಿಗೆ 75 ವರ್ಷ ವಯಸ್ಸಾಗಿತ್ತು. ತೆರಿಗೆ ವಂಚನೆ ಪ್ರಕರಣದಲ್ಲಿ ಇವರು ಬಂಧನಕ್ಕೊಳಾಗಿ ಜೈಲುಪಾಲಾಗಿದ್ದರು.
ಮಕಾಫಿಯವರನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಸ್ಪೈನ್ನ ಕೋರ್ಟ್ ಒಪ್ಪಿಗೆ ನೀಡಿದ ನಂತರ ಅವರ ಸಾವು ಸಂಭವಿಸಿದ್ದು ಆತ್ಮಹತ್ಯೆಯಾಗಿರಬಹುದೆಂದು ಜೈಲಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. 2014 ಮತ್ತು 2018ರ ನಡುವೆ ಅಮೆರಿಕದಲ್ಲ್ಲಿ ತೆರಿಗೆ ರಿಟನ್ ಸಲ್ಲಿಸುವುದರಲ್ಲಿ ಮಕಾಫಿ ವಿಫಲರಾಗಿದ್ದರು. ದಶಲಕ್ಷ ಡಾಲರ್ ವಂಚನೆ ಎಸಗಿದ್ದರು. ನಂತರ, ಕ್ರಿಪ್ಟೊ ಕರೆನ್ಸಿ, ಕನ್ಸಲ್ಟಿಂಗ್ ಕೆಲಸದ ಮೂಲಕ ಭಾರೀ ವರಮಾನ ಗಳಿಸಿದರೂ ತೆರಿಗೆ ರಿಟರ್ನ್ ಕೊಟ್ಟಿರಲಿಲ್ಲ. 30 ವರ್ಷ ಜೈಲು ಶಿಕ್ಷೆ ಅನುಭವಿಸಬಹುದಾದ ಅಪರಾಧವನ್ನು ಇವರ ಮೇಲೆ ಹೊರಿಸಲಾಗಿತ್ತು.
2012ರಲ್ಲಿ ನೆರೆಮನೆಯ ವ್ಯಕ್ತಿಯನ್ನು ಕೊಂದ ಪ್ರಕರಣದಲ್ಲಿ ಮಕಾಫಿಯವರನ್ನು ಪೊಲೀಸರು ಸಂದೇಹದ ಹಿನ್ನೆಲೆಯಲ್ಲಿ ವಿಚಾರಣೆ ಕೂಡ ನಡೆಸಿದ್ದರು. ಮಾದಕವಸ್ತು ಕೇಸಿಗೆ ಸಂಬಂಧಿಸಿ ಪೊಲೀಸರು ಮಕಾಫಿಯ ಶೋಧ ನಡೆಸಿದ್ದರು. ಗ್ವಾಟಮಾಲದಿಂದ ಮಕಾಫಿಯನ್ನು ಬಂಧಿಸಿ ತರಲಾಗಿತ್ತು. 2015ರಲ್ಲಿ ಅಮೆರಿಕಕ್ಕೆ ಮರಳಿದ ಮಕಾಫಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಘಟನೆಯಲ್ಲಿ ಬಂಧನಕ್ಕೊಳಗಾಗಿದ್ದರು. ತನ್ನ ಕೊಲೆಗೆ ಯತ್ನ ನಡೆಯುತ್ತಿದೆ ಎಂದು 2018ರಲ್ಲಿ ಮಕಾಫಿ ಹೇಳಿಕೊಂಡಿದ್ದರು. ವಿಷಪ್ರಾಸನದಿಂದ ಆಸ್ಪತ್ರೆಗೆ ದಾಖಲಾದ ಚಿತ್ರಗಳನ್ನು ಹಂಚಿಕೊಂಡಿದ್ದರು.
1987ರಲ್ಲಿ ಕ್ಯಾಲಿಫೊರ್ನಿಯದಲ್ಲಿ ಮಕಾಫಿ ಅಸೊಸಿಯೇಟ್ಸ್ ಎಂಬ ಸಾಫ್ಟ್ ವೇರ್ ಸಂಸ್ಥೆ ಆರಂಭಿಸಿದ್ದರು. ಇದು ಬೃಹತ್ ಸಂಸ್ಥೆಯಾಗಿ ಬೆಳೆದಿತ್ತು. 1990ರಲ್ಲಿ 50 ದಶಲಕ್ಷ ಅಮೆರಿಕನ್ ಡಾಲರ್ ಆದಾಯ ಮಕಾಫಿಯವರಿಗಿತ್ತು.












