ಸನ್ಮಾರ್ಗ ವಾರ್ತೆ
ಬೆಂಗಳೂರು: ಗಾಝಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಟ್ವೀಟ್ಗಳ ಕುರಿತು ಪ್ರಶ್ನಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರಿಂದ ವಿಚಾರಣಾ ನೋಟೀಸ್ ಪಡೆದಿದ್ದ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಯುಪಿಗೆ ಪ್ರಯಾಣಿಸಬೇಕಾಗಿಲ್ಲ ಎಂದು ಹೇಳಿದೆ. ಆ ಮೂಲಕ ಬಂಧನದಿಂದ ತಾತ್ಕಾಲಿಕ ರಕ್ಷಣೆ ಪಡೆದಿದ್ದಾರೆ.
ಇಂದು ಮನೀಶ್ ರವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರ ಏಕ-ನ್ಯಾಯಾಧೀಶರ ಪೀಠವು, ಈ ವಿಷಯವನ್ನು ಮತ್ತಷ್ಟು ಪರಿಗಣಿಸಬೇಕಾಗಿದೆ ಮತ್ತು ಜೂನ್ 29ರವರೆಗೆ ಆದೇಶಗಳನ್ನು ಕಾಯ್ದಿರಿಸಿದೆ. ಅಲ್ಲಿಯವರೆಗೆ ಯಾವುದೇ ಬಲವಂತದ ಕ್ರಮವಿಲ್ಲ ಎಂದು ಹೇಳಿದೆಯಾದರೂ, ನ್ಯಾಯಾಲಯವು ತನಿಖೆಯನ್ನು ನಿಲ್ಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಪೊಲೀಸರು ತನಿಖೆ ಮಾಡಲು ಅಥವಾ ಪ್ರಶ್ನಿಸಲು ಬಯಸಿದರೆ ಅವರು ಅದನ್ನು ವರ್ಚುವಲ್ ಮೋಡ್(ವೀಡಿಯೊ ಕಾನ್ಫರೆನ್ಸ್ ) ಮೂಲಕ ಮಾಡಬಹುದು” ಎಂದು ನ್ಯಾಯಮೂರ್ತಿ ನರೇಂದರ್ ಹೇಳಿದ್ದಾರೆ.
ಜೂನ್ 17 ರಂದು ಗಾಝಿಯಾಬಾದ್ ಪೊಲೀಸರು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 160 ರ ಅಡಿಯಲ್ಲಿ ಸಾಕ್ಷಿಯಾಗಿ ಗುರುತಿಸುವ ನೋಟಿಸ್ ಕಳುಹಿಸಿದ್ದರು. ಈ ಮೊದಲು ವೀಡಿಯೊ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುಟ್ಟೇನೆಂದು ಮಹೇಶ್ವರಿಯವರು ತಿಳಿಸಿದ್ದರೂ ಇದಕ್ಕೆ ಪೊಲೀಸರು ಸಮ್ಮತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.












