ಸನ್ಮಾರ್ಗ ವಾರ್ತೆ
ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಶಿವಮೊಗ್ಗ ನಗರದ ಸ್ಥಾನೀಯ ಅಧ್ಯಕ್ಷ, HRS ಝೋನಲ್ ಲೀಡರ್ ಆಗಿದ್ದ ಸಾಮಾಜಿಕ ಮುಂದಾಳು ಮುಹಮ್ಮದ್ ಖಾಲಿದ್ ಶಿವಮೊಗ್ಗ ಇಂದು ರಾತ್ರಿ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 57 ವರ್ಷ ವಯಸ್ಸಾಗಿತ್ತು.
ಕೋವಿಡ್ ಬಾಧಿತರಾಗಿ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಸಾಮಾಜಿಕ ಸಂದೇಶಗಳನ್ನು ಸಾರುವ, ಧರ್ಮ ಧರ್ಮಗಳ ನಡುವೆ ಸೌಹಾರ್ದತೆಯ ಸೇತುವೆಯನ್ನು ನಿರ್ಮಿಸುವ, ಧರ್ಮದ ಬಗೆಗಿನ ತಪ್ಪು ಕಲ್ಪನೆಯನ್ನು ದೂರೀಕರಿಸುವಂತಹ ನೂರಾರು ಮಾಡೆಲ್ ಗಳನ್ನು ತಯಾರಿಸಿ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ, ಶಿವಮೊಗ್ಗದ ಮಹಮ್ಮದ್ ಖಾಲಿದ್, ಸಮಾಜ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಶಿವಮೊಗ್ಗ ನಗರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, HRS ನ ಝೋನಲ್ ಲೀಡರ್ ಕೂಡ ಆಗಿದ್ದರು. ಸನ್ಮಾರ್ಗ, ಅನುಪಮ ಪತ್ರಿಕೆಯ ಬೆಳವಣಿಗೆಗೆ ಕೂಡ ಸಹಕಾರ ನೀಡಿದ್ದಾರೆ.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಶಾಂತಿ ಪ್ರಕಾಶನ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮಿ ಹಿಂದ್ ನ ಅಬ್ದುಸ್ಸಲಾಮ್ ಉಪ್ಪಿನಂಗಡಿ, ಸಯೀದ್ ಇಸ್ಮಾಯೀಲ್, K.M. ಅಶ್ರಫ್, ಸೋಲಿಡಾರಿಟಿ ಯೂತ್ ಮೂಮೆಂಟ್ ನ ಲಬೀದ್ ಶಾಫಿ, ಎಸ್ ಐ ಓ ರಾಜ್ಯಾಧ್ಯಕ್ಷ ಶೆಹಝಾದ್ ಶಕೀಬ್, HRS ಕ್ಯಾಪ್ಟನ್ ಅಮೀರ್ ಕುದ್ರೋಳಿ ಇತರ ನಾಯಕರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬ ಸದಸ್ಯರಿಗೆ ಸೃಷ್ಟಿಕರ್ತನು ದುಃಖ ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.













