ಸನ್ಮಾರ್ಗ ವಾರ್ತೆ
ಮುಂಬೈ: ಶಿವಸೇನೆ-ಬಿಜೆಪಿ ಪರಸ್ಪರ ಸಂಬಂಧ ಪಾಕಿಸ್ತಾನ ಭಾರತದಂತಲ್ಲ. ಬದಲಾಗಿ ವಿವಾಹ ವಿಚ್ಛೇದನ ಮಾಡಿಕೊಂಡ ನಟ ಆಮಿರ್ ಖಾನ್-ನಿರ್ದೇಶಕಿ ಕಿರಣ್ ರಾವ್ರ ನಡುವಿನ ಸಂಬಂಧಂತೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದು, ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ಏನೋ ಬದಲಾವಣೆ ನಡೆಯುವ ಸೂಚನೆ ನೀಡಿದ್ದಾರೆ. .
ನಾವು ಭಾರತ ಪಾಕಿಸ್ತಾನದಂತಲ್ಲ. ಆಮಿರ್ ಖಾನ್ – ಕಿರಣ್ ರಾವ್ರನ್ನು ನೋಡಿ. ಅವರಂತೆ ನಮ್ಮ ರಾಜಕೀಯ ದಾರಿ ಬೇರೆ ಬೇರೆಯಾಗಿರಬಹುದು ಆದರೆ ಸೌಹಾರ್ದಕ್ಕೆ ಅಲ್ಲಿ ತೊಂದರೆಯಿಲ್ಲ ಎಂದು ರಾವುತ್ ಹೇಳಿದರು.
ಆಮಿರ್ ಖಾನ್ ಕಿರಣ್ ರಾವ್ ಇತ್ತೀಚೆಗೆ ಜಂಟಿ ಹೇಳಿಕೆ ನೀಡಿ ವಿವಾಹ ವಿಚ್ಛೇದನ ಮಾಡಿಕೊಂಡಿದ್ದರು. ವಿಡಿಯೋ ಮೂಲಕ ನಾವು ಪರಸ್ಪರ ವಿಚ್ಚೇಧನ ಮಾಡಿಕೊಂಡರೂ ಮಗನ ರಕ್ಷಕರಾಗಿ ಮುಂದುವರಿಯುವುದಾಗಿ ಇಬ್ಬರೂ ಹೇಳಿದ್ದರು. ಶಿವಸೇನೆ ಎಂದೂ ಬಿಜೆಪಿಯ ಶತ್ರುವಲ್ಲ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ರ ಹೇಳಿಕೆಯ ಬೆನ್ನಿಗೆ ರಾವುತ್ ಈ ಹೇಳಿಕೆ ನೀಡಿದ್ದಾರೆ. ಶಿವಸೇನೆ ಪುನಃ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂದು ಪ್ರಶ್ನಿಸಿದಾಗ ಪರಿಸ್ಥಿತಿಯನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳುವುದಾಗಿ ಫಡ್ನವೀಸ್ ಹೇಳಿದ್ದರು.
ನಾವು ಎಂದೂ ಶತ್ರುಗಳಲ್ಲ. ಯಾರೊಂದಿಗೆ ಹಿಂದೆ ಶಿವಸೇನೆ ಹೋರಾಟ ನಡೆಸಿತ್ತೋ ಅವರೊಂದಿಗೆ ಸಖ್ಯ ಮಾಡಿಕೊಂಡಾಗ ನಾವು ದೂರವಾದೆವು. ರಾಜಕೀಯದಲ್ಲಿ ಆದರೆ ಗೀದರೆ ಎಂಬುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಫಡ್ನವಿಸ್ ಹೇಳಿದರು. ಫಡ್ನವಿಸ್ ಹೇಳಿಕೆ ನಿಜವಾದರೂ ಎರಡು ಪಾರ್ಟಿ ಸಖ್ಯ ಮಾಡಿಕೊಂಡು ಸರಕಾರ ರಚಿಸುತ್ತದೆ ಎಂದು ಅದರ ಅರ್ಥ ಅಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಸುದೀರ್ಘ ಸಮಯದಿಂದ ಮಿತ್ರ ಪಕ್ಷಗಳಾಗಿದ್ದ ಶಿವಸೇನೆ-ಬಿಜೆಪಿಯು ಮಹಾರಾಷ್ಟ್ರ ಚುನಾವಣೆಯ ನಂತರ ಅಧಿಕಾರದ ವಿಷಯದಲ್ಲಿ ಸಹಮತ ಇರದ ಕಂಡುಬರದ ಹಿನ್ನೆಲೆಯಲ್ಲಿ ಬೇರೆ ಬೇರೆ ಆಗಿದ್ದವು. ಶಿವಸೇನೆಯು ಕಾಂಗ್ರೆಸ್ ಎನ್ಸಿಪಿ ಯೊಂದಿಗೆ ಸೇರಿ ಸಖ್ಯ ಮಾಡಿಕೊಂಡಿತ್ತು. ಬಳಿಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಆದರೆ ಸಖ್ಯದಲ್ಲಿ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಉದ್ಧವ್ ಠಾಕ್ರೆ ಪ್ರಧಾನಿಯವರನ್ನು ಭೇಟಿಯಾಗಿ ಮಾತನಾಡಿದ್ದು ಹೆಚ್ಚು ವದಂತಿ ಹರಡಲು ಕಾರಣವಾಗಿತ್ತು.












