ಬರಹ: ಗ್ಲಾಡ್ ಸನ್ ಅಲ್ಮೇಡಾ
ಇದು ಪ್ರಕೃತಿದತ್ತ ಸಾವಲ್ಲ, ಬದಲಾಗಿ ಪ್ರಭುತ್ವ ಮುಂದೆನಿಂತು ನಡೆಸಿದ ಕೊಲೆ. ಫಾ. ಸ್ಟ್ಯಾನ್ ಸ್ವಾಮಿ ಸತ್ತಿಲ್ಲ, ಅವರ ಕೊಲೆಯಾಗಿದೆ. ಆದಿವಾಸಿಗಳ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಡಿದ, ಪ್ರಭುತ್ವದ ವಿರುದ್ಧ ಸಿಡಿದೆದ್ದ ಸ್ಟ್ಯಾನ್ ಸ್ವಾಮಿ(84) ಕೊನೆಗೂ ಅದೇ ಪ್ರಭುತ್ವದ ಅಹಂಕಾರ, ದರ್ಪಕ್ಕೆ ಬಲಿಯಾದರು.
ಅವರ ಮೇಲೆ ಅತೀ ಕಠಿಣ UAPA ಕಾಯಿದೆಯಡಿ ಕೇಸ್ ಹಾಕಲಾಗಿತ್ತು. ಹೋರಾಟಗಾರರನ್ನು ಭಯೋತ್ಪಾದಕರೆಂದು ಪರಿಗಣಿಸಿ ಜೈಲಿಗಟ್ಟಲಾಯಿತು. ತನ್ನ ನಡುಗುವ ಕೈಗಳಿಂದ ಗ್ಲಾಸ್ ಹಿಡಿದು ನೀರೂ ಕುಡಿಯಲು ಆಗುತ್ತಿಲ್ಲ, ಆದ್ದರಿಂದ ತನಗೊಂದು ಸ್ಟ್ರಾ ಹಾಗೂ ಸಿಪ್ಪರ್ ಕೊಡಿ ಎಂದು ಅವರು ಕೋರ್ಟ್ ಮೊರೆ ಹೋಗಬೇಕಾಯಿತು. ಅದನ್ನು ವಿಚಾರಣೆಗೆತ್ತಿಕೊಳ್ಳಲು ಇಪ್ಪತ್ತು ದಿನ ಬೇಕಾಯಿತು. ಕೋರ್ಟ್ ಅವರಿಗೆ ಸ್ಟ್ರಾ ಹಾಗೂ ಸಿಪ್ಪರ್ ಕೊಡಿ ಎಂದಾಗ ಎನ್‍ಐಎ ನಮ್ಮ ಬಳಿ ಅವುಗಳಿಲ್ಲ ಎಂದು ಹೇಳಿತು. ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಸ್ಟ್ರಾ ಹಾಗೂ ಸಿಪ್ಪರ್ ಖರೀದಿಸಿ ಎನ್‍ಐಎ ಗೆ ಕಳುಹಿಸಿ ಅವರ ಮಾನಗಳೆದಾಗ ಸ್ಟ್ಯಾನ್ ಸ್ವಾಮಿಗೆ, ಬಂಧನವಾಗಿ 50 ದಿನಗಳ ಬಳಿಕ ಸಿಪ್ಪರ್ ಸಿಕ್ಕಿತು.
ಕೇವಲ ಪ್ರಭುತ್ವ ಅಲ್ಲ ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡಾ ಈ ಕೊಲೆಗೆ ಜವಾಬ್ದಾರಿಯನ್ನು ಹೊರಬೇಕು. ಕಳೆದ ಆರೇಳು ತಿಂಗಳಲ್ಲಿ ಸ್ಟ್ಯಾನ್ ಸ್ವಾಮಿ ಅದೆಷ್ಟು ಬಾರಿ ಕೋರ್ಟ್ ಮೊರೆ ಹೋಗಿದ್ದಾರೋ? ಆದರೂ ಪ್ರತೀ ಬಾರಿ ‘ತಾರೀಕ್ ಪೆ ತಾರೀಕ್, ತಾರೀಕ್ ಪೆ ತಾರೀಕ್’ ಎಂದರೇ ಹೊರತು ನ್ಯಾಯ ಕೊಡಿಸಲಿಲ್ಲ. ನ್ಯಾಯಾಧೀಶರ ತಾರೀಕು ಬರಲೇ ಇಲ್ಲ ಆದರೆ ಯಮರಾಯನ ತಾರೀಕು ಇವತ್ತು ಬಂದುಬಿಟ್ಟಿತು.
ಸ್ಟ್ಯಾನ್ ಸ್ವಾಮಿಗೆ ಪ್ರಭುತ್ವ, ಅಸಮಾನತೆ, ಅನ್ಯಾಯದ ವಿರುದ್ಧ ಹೋರಾಟ ಹೊಸತಲ್ಲ. ಅವರು ಕೇವಲ ಪ್ರಸಕ್ತ ಸರಕಾರದ ಅವಧಿಯಲ್ಲಿ ಮಾತ್ರ ಪ್ರತಿಭಟಿಸಿದ್ದಲ್ಲ, ಹೋರಾಡಿದ್ದಲ್ಲ. ದಶಕಗಳಿಂದ ಹೋರಾಟದ ಹಾದಿಯಲ್ಲಿಯೇ ಇದ್ದವರವರು. ಆದಿವಾಸಿಗಳ ಪರ ಸದಾಕಾಲ ದನಿಯೆತ್ತಿದ್ದವರು. ಸಂವಿಧಾನ ಐದನೇ ಪರಿಚ್ಚೇಧವನ್ನು ಅನುಷ್ಟಾನ ಮಾಡದ್ದರ ವಿರುದ್ಧ ಅವರ ಹೋರಾಟ ಇವತ್ತು ನಿನ್ನೆಯದಲ್ಲ. ಬರೀ ಭಾರತ ಸರ್ಕಾರವೇಕೆ, ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಫಿಲಿಪೈನ್ಸ್ ದೇಶದಲ್ಲಿ ತತ್ವಶಾಶ್ತ್ರ ಹಾಗೂ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾಗ, ಅಲ್ಲಿನ ಸ್ಥಳೀಯ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ಹಮ್ಮಿಕೊಂಡು, ಪ್ರಭುತ್ವದ ವಿರುದ್ಧ ದನಿಯೆತ್ತಿದ್ದ ಧೀಮಂತ ವ್ಯಕ್ತಿ ಅವರು. ಇಂಥ ಅಪ್ರತಿಮ ಚೇತನ ಇನ್ನಿಲ್ಲ.
ಸ್ಟ್ಯಾನ್ ಸ್ವಾಮಿಯ ಈ ಫೊಟೋ ನೋಡಿ. ಹಿಟ್ಲರನ ಗ್ಯಾಸ್ ಚೇಂಬರ್‌ಗಳ ಕಥನ ಹೇಗೆ ಇವತ್ತಿಗೂ ವಿಶ್ವವನ್ನು ಕಾಡುತ್ತಿದೆಯೋ, ಹಾಗೆಯೇ ಆಸ್ಪತ್ರೆಯ ಹಾಸಿಗೆಯ ಮೇಲಿರುವ ಎಂಬತ್ನಾಲ್ಕರ ಹರೆಯದ ಪಾರ್ಕಿನ್ಸನ್ ಪೀಡಿತ ಈ ಹೋರಾಟಗಾರನ ಕತೆ ಭವಿಷ್ಯದಲ್ಲಿ ನಮ್ಮ ದೇಶದ ಕರಾಳ ಇತಿಹಾಸ ಹಾಗೂ ಪ್ರಭುತ್ವದ ಅಹಂಕಾರವನ್ನು ಬಿಚ್ಚಿಡುವ ಸಾಧನವಾಗಲಿದೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಂಧನದಲ್ಲಿರುವಾಗಲೇ ಕೋವಿಡ್‌ಗೆ ಒಳಗಾದರು. ಆದರೂ 84 ರ ಹರೆಯದ, ಪಾರ್ಕಿನ್ಸನ್ ಹಾಗೂ ಇತರೆ ವಯೋ ಸಹಜ ಆರೋಗ್ಯ ಸಮಸ್ಯೆಗಳಿರುವ ಅವರನ್ನು ಸರ್ಕಾರ ಇನ್ನಿಲ್ಲದಂತೆ ಪೀಡಿಸಿತು.
ಸ್ಟ್ಯಾನ್ ಸ್ವಾಮಿಯ ಜಾಗದಲ್ಲಿ ನಾಳೆ ನಾವಿರಲಿದ್ದೇವೆ. ಪ್ರಭುತ್ವದ ಕೋವಿಗಳಿಗೆ ಹಾಗೂ ಪ್ರಭುತ್ವದ ಸರಪಣಿಗಳಿಗೆ ವ್ಯಕ್ತಿ ಕಾಣಿಸುವುದಿಲ್ಲ, ಬದಲಾಗಿ ಪ್ರಭುತ್ವದ ವಿರುದ್ಧದ ಧ್ವನಿ ಮಾತ್ರ ಕೇಳಿಸುತ್ತದೆ. ಹಾಗಾಗೀ ಇವತ್ತ್ರು ಸ್ಟ್ಯಾನ್ ಸ್ವಾಮಿಯ ಕಾಲಿಗಿದ್ದ ಸರಪಣಿ ನಾಳೆ ನಮ್ಮಲ್ಲಿ ಯಾರೋ ಒಬ್ಬರ ಕಾಲಿಗೂ ಬೀಳಬಹುದು. ನಾವಾಗಿಯೇ ಇದನ್ನು ಆರಿಸಿರುವುದು, ನಾವೇ ಅದರ ಪರಿಣಾಮಗಳನ್ನು ಉಣಲಿದ್ದೇವೆ.