ಮುಖ್ಯಮಂತ್ರಿ ಬದಲಾವಣೆ: ಪಕ್ಷಾಂತರಿಗಳ ಮೇಲೆ ಕವಿದ ಆತಂಕ

0
648

ಸನ್ಮಾರ್ಗ ವಾರ್ತೆ

ಬೆಂಗಳೂರು,ಜು.24: ಪಕ್ಷಾಂತರಗೊಂಡು ಬಿಜೆಪಿ ಸೇರಿ ಸಚಿವರಾಗಿರುವ ಆರು ಮಂದಿಯ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪರ ರಾಜೀನಾಮೆ ಸುದ್ದಿ ಆತಂಕಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್, ಜೆಡಿಎಸ್ ಸಖ್ಯ ಸರಕಾರವನ್ನು ಉರುಳಿಸಿ ಬಿಜೆಪಿಗೆ ಬಂದಿದ್ದ ಯಡಿಯೂರಪ್ಪರ ಆಶ್ರಯದಲ್ಲಿರುವ ಆರು ಮಂದಿ ಶುಕ್ರವಾರ ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ.

ಸಚಿವರಾದ ಡಾ.ಕೆ. ಸುಧಾಕರ್, ಬೈರತಿ ಬಸವರಾಜ, ಬಿ.ಸಿ ಪಾಟೀಲ್, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ, ಶಿವರಾಮ್ ಹೆಬ್ಬಾರ್ ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಯಡಿಯೂರಪ್ಪರನ್ನು ಬೆಂಬಲಿಸಿ ಇವರು ಕೂಡ ರಾಜೀನಾಮೆ ನೀಡಲು ಸಿದ್ಧರಾಗುತ್ತಿದ್ದಾರೆ ಎಂದು ವದಂತಿ ಹರಡುತ್ತಿದೆ. ಆಪರೇಷನ್ ಕಮಲದ ಮೂಲಕ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರಕಾರವನ್ನು ಕೆಡವಿದ ಯಡಿಯೂರಪ್ಪನವರು ತಮ್ಮದೇ ಪಾರ್ಟಿಯ ಹಲವು ನಾಯಕರಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಪಾರ್ಟಿ ತೊರೆದು ಬಿಜೆಪಿ ಸೇರಿದ ನಾಯಕರನ್ನು ಅವರು ಸಂರಕ್ಷಿಸಿದ್ದರು.

ಉಪಚುನಾವಣೆಯಲ್ಲಿ ಗೆದ್ದು ಬಂದವರನ್ನು ಯಡಿಯೂರಪ್ಪ ಸಚಿವರನ್ನಾಗಿ ಮಾಡಿದ್ದರು. ಉಪಚುನಾವಣೆಯಲ್ಲಿ ಸೋತರೂ ಎಂಟಿಬಿ ನಾಗರಾಜ್‍ರನ್ನು ಎಂಎಲ್‍ಸಿ ಮಾಡಿ ಸಚಿವರನ್ನಾಗಿಸಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ತಾವು ಕಡೆಗಣನೆಗೊಳಗಾಗಲಿದ್ದೇವೆ ಎಂಬ ಆತಂಕ ಕಾಂಗ್ರೆಸ್, ಜೆಡಿಎಸ್ ತೊರೆದು ಬಂದವರಲ್ಲಿದೆ. ತಾವು ರಾಜೀನಾಮೆ ನೀಡುವುದಿಲ್ಲ ಸೌಹಾರ್ದ ಭೇಟಿಯಿದೆಂದು ಆರು ಮಂದಿಯೂ ಸ್ಪಷ್ಟನೆ ನೀಡಿದ್ದಾರೆ.