ಸನ್ಮಾರ್ಗ ವಾರ್ತೆ
ಮುಂಬೈ,ಜು.24: ಕೆಲವು ದಿವಸಗಳಿಂದ ಭಾರೀ ಮಳೆ ಸುರಿದ ಪರಿಣಾಮ ಮುಂಬೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿದ್ದು ಇದುವರೆಗೆ 136 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಯಗಡ್ನಲ್ಲಿ ಮಣ್ಣು ಕುಸಿತವಾಗಿ 36 ಮಂದಿ ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಶೋಧ ಕಾರ್ಯ ನಡೆಯುತ್ತಿದೆ. 32 ಮನೆಗಳು ಇಲ್ಲಿ ಮಣ್ಣುಪಾಲಾಗಿದೆ.
ಕೊಂಕಣ್ ವಲಯದಲ್ಲಿನ ಏಳು ಜಿಲ್ಲೆಗಳಲ್ಲಿ ಭಾರೀ ಮಳೆ ಈಗಲೂ ಬರುತ್ತಿದೆ. ಇಲ್ಲಿ ಮಣ್ಣು ಕುಸಿತ, ನೆರೆ ಹಾವಳಿಯಿಂದಾಗಿ ಸಾವಿರಾರು ಮಂದಿಯನ್ನು ತೆರವುಗೊಳಿಸಲಾಗಿದೆ. ಮಹಾರಾಷ್ಟ್ರದ ಪಶ್ಚಿಮದ ಸತಾರದಲ್ಲಿ ನೆರೆಯಿಂದ ಹಲವಾರು ಜೀವ ಹಾನಿಯಾಗಿದೆ. ಇಲ್ಲಿ 27 ಮಂದಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದರು.
ಗೊಂಡಿಯ, ಚಂದ್ರಪುರ, ಥಾಣೆ, ಪಾಲ್ಗರ್, ರತ್ನಗಿರಿ, ಸಾಂಗ್ಲಿಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಇನ್ನೂ ಕೆಲವು ಜಿಲ್ಲೆಗಳಿಂದ ಮಳೆ ಹಾನಿಯ ಬಗ್ಗೆ ಇನ್ನಷ್ಟೆ ವರದಿ ಬರಬೇಕಿದೆ. ಕೊಲ್ಲಾಪುರದಲ್ಲಿ 40,000 ಮಂದಿಯನ್ನು ಬೇರೆ ಸ್ಥಳಕ್ಕೆ ಸ್ಥಾಳಾಂರಿಸಲಾಗಿದೆ. ಇಲ್ಲಿ ಎಂಟು ನೇಪಾಳಿ ಕಾರ್ಮಿಕರ ಸಹಿತ 11 ಮಂದಿಯಿದ್ದ ಬಸ್ ನೀರಿನಲ್ಲಿ ಕೊಚ್ಚಿಹೋಗಿತ್ತು. ಪ್ರಯಾಣಿಕರು ಅದೃಷ್ಟಾವಶಾತ್ ಪಾರಾಗಿದ್ದಾರೆ. ರಾಜ್ಯದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರಕಾರ ಐದು ಲಕ್ಷ ರೂಪಾಯಿ ನಷ್ಟಪರಿಹಾರ ಘೋಷಿಸಿದೆ.












