ಜಮ್ಮು ಮತ್ತು ಕಾಶ್ಮೀರದ ಗಡಿಪ್ರದೇಶದಲ್ಲಿ ಈ ವರ್ಷ ಭಯೋತ್ಪಾದಕ ಘಟನೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಗಡಿಯಾದ್ಯಂತ ಉಗ್ರವಾದಿಗಳು ಮತ್ತು ಅವರ ಬೆಂಬಲಿಗರು ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಸಫಲರಾಗಿದ್ದಾರೆ.
ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, 2 ಡಿಸೆಂಬರ್ 2018 ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 587 ಭಯೋತ್ಪಾದಕ ಘಟನೆಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 329 ಭಯೋತ್ಪಾದಕ ಘಟನೆಗಳು ನಡೆದಿವೆ. 2016 ಮತ್ತು 2017 ರಲ್ಲಿ, 322 ಮತ್ತು 342 ಭಯೋತ್ಪಾದಕ ಘಟನೆಗಳು ಜಮ್ಮು ಮತ್ತು ಕಾಶ್ಮೀರದಿಂದ ವರದಿಯಾಗಿವೆ. ಆಗ ಮೆಹಬೂಬ ಮುಫ್ತಿ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಪಿಡಿಪಿ ಒಕ್ಕೂಟದ ಆಳ್ವಿಕೆಯಿತ್ತು.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ, ಭಯೋತ್ಪಾದಕ ಘಟನೆಗಳ ಹೆಚ್ಚಳ ಗಡಿಯುದ್ದಕ್ಕೂ ಅವರಿಗೆ ಒದಗುವ ಬೆಂಬಲದೊಂದಿಗೆ ಸಂಬಂಧ ಹೊಂದಿದೆ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯದಲ್ಲಿ 200 ಮಂದಿ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಈ ವರ್ಷ ಸಶಸ್ತ್ರ ಪಡೆಗಳಿಂದ 238 ಉಗ್ರಗಾಮಿಗಳು ಕೊಲ್ಲಲ್ಪಟ್ಟಿದ್ದಾರೆ.
ಭಯೋತ್ಪಾದನಾ ಘಟನೆಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 74 ಯೋಧರು ಮತ್ತು ಈ ವರ್ಷ 86 ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಈ ವರ್ಷ 37 ನಾಗರಿಕರು ಭಯೋತ್ಪಾದಕ ಸಂಬಂಧಿತ ಘಟನೆಗಳಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.












