ಸನ್ಮಾರ್ಗ ವಾರ್ತೆ
ಯುಎಇಯಲ್ಲಿ ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಸತತ ಮೂರನೇ ದಿನ ಸೋಂಕಿತರ ಸಂಖ್ಯೆ 200ಕ್ಕಿಂತ ಕಡಿಮೆಯಾಗುವುದರೊಂದಿಗೆ ಯುಎಇ ಸಶಸ್ತ್ರ ಸೇನೆಯ ಡೆಪ್ಯೂಟಿ ಸುಪ್ರೀಂ ಕಮಾಂಡರ್ ಮತ್ತು ಅಬುದಾಬಿ ಆಡಳಿತಗಾರ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಂತೋಷ ವ್ಯಕ್ತಪಡಿಸಿದ್ದು ದೇವನಿಗೆ ಸ್ತುತಿ ಎಂದು ಹೇಳಿದ್ದಾರೆ.
ನಾವು ಕೊರೋನವನ್ನು ಸೋಲಿಸಿದ್ದೇವೆ. ಇದಕ್ಕಾಗಿ ದೇವನಿಗೆ ಸ್ತುತಿ ಎಂದವರು ಹೇಳಿದ್ದಾರೆ. ಇದೊಂದು ಸಂತೋಷದ ದಿನವಾಗಿದೆ. ಎಲ್ಲರನ್ನೂ ಜೊತೆಯಾಗಿ ನೋಡುವುದಕ್ಕೆ ಖುಷಿಯಾಗುತ್ತಿದೆ. ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ರೂಪಕ್ಕೆ ಮರಳುತ್ತಿದೆ. 2020 ದುರಂತ ವರ್ಷವಾಗಿತ್ತು. ಧಾರಾಳ ಸವಾಲುಗಳನ್ನು ಈ ವರ್ಷ ನಮ್ಮ ಮುಂದಿಟ್ಟಿತು. ಅನೇಕ ಮಂದಿ ಸಾವಿಗೀಡಾದರು. ಇವರೆಲ್ಲರಿಗೂ ನಾನು ಸಂತಾಪ ಸೂಚಿಸುವೆ ಎಂದು ಸಭೆಯೊಂದರಲ್ಲಿ ಮಾತಾಡುತ್ತಾ ಅವರು ಹೇಳಿದರು.
ದೇವನ ಅನುಗ್ರಹದಿಂದ ಮಾತ್ರ ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ. ಉಳಿದ ಅನೇಕ ರಾಷ್ಟ್ರಗಳು ಈಗಲೂ ಕೊರೋನಾ ಸಂಕಟದಲ್ಲಿ ಇರುವಾಗಲೂ ಯುಎಇಗೆ ಅದರ ವಿರುದ್ಧ ಗೆಲ್ಲಲು ಸಾಧ್ಯವಾಗಿದೆ ಎಂದವರು ಹೇಳಿದ್ದಾರೆ.












