✍️ ಅಮಾನ್
ಈ ದೇಶದಲ್ಲಿ ಆಹಾರ ವಸ್ತುಗಳು ಮತ್ತು ತೈಲದ ಬೆಲೆ ಏರುವಷ್ಟು ವೇಗವಾಗಿ ಇನ್ನಾವುದರ ಬೆಲೆಯೂ ಏರಿಕೆ ಆಗುವುದಿಲ್ಲ. ಉದ್ಯೋಗಿಯ ವೇತನ ವರ್ಷಕ್ಕೊಮ್ಮೆ ಏರುವುದೇ ಕಷ್ಟಕರ ಎಂಬ ಸ್ಥಿತಿಯಿದೆ. ಉದ್ಯಮಗಳು ಉಸಿರಾಡಲು ಕಷ್ಟಪಡುತ್ತಿವೆ. ಅಂಗಡಿ-ಮಳಿಗೆಗಳ ಆರೋಗ್ಯವೂ ಚೆನ್ನಾಗಿಲ್ಲ. ಈ ಎಲ್ಲಾ ಕಡೆಯ ಉದ್ಯೋಗಿಗಳ ವೇತನದಲ್ಲಿ ವರ್ಷಕ್ಕೊಮ್ಮೆ ಸಣ್ಣ ಪ್ರಮಾಣದಲ್ಲಿ ಏರಿಕೆ ಆಗುವುದೂ ಇದೆ ಮತ್ತು ಕೆಲವೊಮ್ಮೆ ಆಗದೇ ಇರುವುದೂ ಇದೆ. ಆದರೆ,
ಅವೇ ಅಂಗಡಿಗಳಲ್ಲಿ ವಸ್ತುಗಳಿಗೆ ವರ್ಷದಲ್ಲಿ ಹತ್ತಾರು ಬಾರಿ ಬೆಲೆ ಏರುತ್ತಲೇ ಇರುತ್ತದೆ. ಉದ್ಯೋಗಿಯ ವೇತನವನ್ನು ಅಣಕಿಸುವಂತೆ ಆಹಾರ ಧಾನ್ಯಗಳು ಮತ್ತಿತರ ದಿನಸಿ ವಸ್ತುಗಳು ಬೆಲೆ ಹೆಚ್ಚಿಸಿಕೊಂಡು ನಗುತ್ತಿರುತ್ತವೆ. ಸದ್ಯ ರಾಜ್ಯದಲ್ಲಿ ಹಾಲು ಮತ್ತು ಹಾಲುತ್ಪನ್ನಗಳು ಹಾಗೂ ಬಸ್ ದರದಲ್ಲಿ ಒಮ್ಮೆಲೇ ಅತೀ ಅನ್ನುವಷ್ಟು ಏರಿಕೆಯಾಗಿದೆ. ಹೆಚ್ಚಿದ ತೈಲಬೆಲೆ ಮತ್ತು ಅನಾವೃಷ್ಟಿಯನ್ನು ಹಾಲಿನ ಬೆಲೆ ಏರಿಕೆಗೆ ಕಾರಣವಾಗಿ ನೀಡಲಾಗಿದೆ. ಬಸ್ ದರ ಏರಿಕೆಗೂ ತೈಲಬೆಲೆ ಏರಿಕೆಯನ್ನೇ ಕಾರಣವಾಗಿ ಕೊಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ದಿನಸಿ ವಸ್ತುಗಳಿಗೆ ಏನು ಬೆಲೆ ಇತ್ತೋ ಅವುಗಳಿಗಿಂತ ಈಗ 5ರಿಂದ 8 ರೂಪಾಯಿಯಷ್ಟು ಏರಿಕೆಯಾಗಿದೆ. ಉದಾಹರಣೆಗೆ, ಕೆಳಗಿನ ಕೋಷ್ಟಕವನ್ನು ಗಮನಿಸಿರಿ.

2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ನೇತೃತ್ವದ ಎನ್ಡಿಎ ಕೂಟವು ಬೆಲೆ ಏರಿಕೆಯನ್ನು ಪ್ರಮುಖ ಸಮಸ್ಯೆಯಾಗಿ ಬಿಂಬಿಸಿತ್ತು. ಮಾತ್ರವಲ್ಲ, ಬೆಲೆ ಇಳಿಸುವ ಭರವಸೆ ನೀಡಿತ್ತು. ಮನ್ಮೋಹನ್ ಸಿಂಗ್ ಸರಕಾರದ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ನಾಯಕರು ಗ್ಯಾಸ್ ಸಿಲಿಂಡರ್ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸಿರುವುದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು. ಅಮಿತಾಬ್ ಬಚ್ಚನ್, ಶಿಲ್ಪಾ ಶೆಟ್ಟಿ ಸಹಿತ ಅನೇಕ ನಟ-ನಟಿಯರು ಸರಕಾರದ ತೈಲ ಬೆಲೆ ಏರಿಕೆಯನ್ನು ವ್ಯಂಗ್ಯ ಮಾಡಿ ಪ್ರಶ್ನಿಸಿದ್ದರು. ಹೀಗೆ ಜನರು ಎನ್ಡಿಎ ಮೇಲೆ ಭರವಸೆ ಇಟ್ಟರು. ಬೆಲೆ ಏರಿಸದ ಮತ್ತು ದಿನನಿತ್ಯ ವಸ್ತುಗಳ ಬೆಲೆಯನ್ನು ಇಳಿಸುವ ನಿರೀಕ್ಷೆಯೊಂದಿಗೆ ಎನ್ಡಿಎಗೆ ಮತ ನೀಡಿದರು. ನರೇಂದ್ರ ಮೋದಿ ಪ್ರಧಾನಿಯೂ ಆದರು. ಆದರೆ,
ಆ ಬಳಿಕದಿಂದ ನಡೆದಿರುವ ಬೆಲೆ ಏರಿಕೆಯನ್ನು ನೋಡಿದರೆ ಆಘಾತವಾಗುತ್ತದೆ. ಗ್ಯಾಸ್ ಸಿಲಿಂಡರನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿದ ಅದೇ ಪಕ್ಷ ಆಗಿನ ಬೆಲೆಗಿಂತ ದುಪ್ಪಟ್ಟು ಬೆಲೆಯನ್ನು ಗ್ಯಾಸ್ಗೆ ಏರಿಸಿ ಈಗ ಸಮರ್ಥಿಸಿಕೊಳ್ಳಲಾಗುತ್ತಿದೆ. ಪೆಟ್ರೋಲ್-ಡೀಸೆಲ್ ಬೆಲೆಗಳು ಆಕಾಶ ಮುಟ್ಟಿದುವು. ಹಾಗಂತ, ಅಂತಾರಾಷ್ಟ್ರೀಯ ತೈಲ ಮಾರು ಕಟ್ಟೆಯಲ್ಲಿ ಬ್ಯಾರಲ್ ಒಂದರ ಬೆಲೆ ಮನ್ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಇದ್ದುದಕ್ಕಿಂತಲೂ ಕಡಿಮೆ ಇರುವ ಈಗಿನ ಸಮಯದಲ್ಲೂ ಈ ಏರಿಕೆ ಮಾಡಿ ಸಮರ್ಥಿಸಿಕೊಳ್ಳುವ ಮೂಲಕ ಜನರ ನಿರೀಕ್ಷೆಯನ್ನೆಲ್ಲಾ ಸರ್ಕಾರ ಹುಸಿ ಮಾಡಿದೆ. 2014ರಲ್ಲಿ ಮನ್ಮೋಹನ್ ಸಿಂಗ್ ಸರಕಾರ ಇರುವಾಗ ತೈಲ ಬೆಲೆಗಳು ಹೇಗಿದ್ದುವು ಮತ್ತು ಈ 2026ರಲ್ಲಿ ಹೇಗಿವೆ ಎಂಬುದನ್ನು ಈ ಕೆಳಗಿನ ಚಾರ್ಟ್ನಿಂದ ಸ್ಪಷ್ಟಪಡಿಸಿಕೊಳ್ಳಬಹುದು.

2014ರಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ಯಾರಲ್ ಒಂದಕ್ಕೆ ಕಚ್ಚಾ ತೈಲದ ಬೆಲೆ 105ರಿಂದ 109 ಡಾಲರ್ ಇತ್ತು. ಅದೇ ಮಾರುಕಟ್ಟೆಯಲ್ಲಿ ಈ 2026 ರಲ್ಲಿ ಬ್ಯಾರಲ್ ಒಂದಕ್ಕೆ ಕಚ್ಚಾತೈಲದ ಬೆಲೆ 70ರಿಂದ 75 ಡಾಲರ್. ಅಲ್ಲದೇ, ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 140 ಡಾಲರ್ಗೆ ಏರಿದ್ದಾಗಲೂ ಮನ್ಮೋಹನ್ ಸಿಂಗ್ ಸರಕಾರ ಪೆಟ್ರೋಲ್ ಬೆಲೆಯನ್ನು 80 ರೂಪಾಯಿ ದಾಟದಂತೆ ನೋಡಿ ಕೊಂಡಿದ್ದರು. ಅಂಥ ಕಠಿಣ ಸಮಯದಲ್ಲೂ ಮತ್ತು ಸಾಗಾಟ ವೆಚ್ಚ ಅತ್ಯಧಿಕವಾಗಿದ್ದ ಸಮಯದಲ್ಲೂ ಸೋನಾ ಮಸ್ಸೂರಿ ಅಕ್ಕಿ ಬೆಲೆ ಸುಮಾರು 45 ರೂಪಾಯಿಗೆ ಲಭ್ಯ ವಾಗುವಂತೆ ನೋಡಿಕೊಂಡಿದ್ದರು. ಸಕ್ಕರೆ 45 ರೂಪಾಯಿ, ಮೆಣಸು 45 ರೂಪಾಯಿ, ತೊಗರಿಬೇಳೆ 70 ರೂಪಾಯಿ, ಗೋಧಿ ಹಿಟ್ಟು 25 ರೂಪಾಯಿಗೆ ಸಿಗುವಂತೆ ನೋಡಿಕೊಂಡಿದ್ದರು. ಈಗಿನ ಅಂಕಿ ಅಂಶ ಪ್ರಕಾರ, 2014ರಿಂದ ಈ 2026ರ ನಡುವೆ ದಿನನಿತ್ಯ ಬಳಸುವ ಆಹಾರ ಉತ್ಪನ್ನಗಳ ಬೆಲೆಯಲ್ಲಿ 50%ರಿಂದ 80% ಹೆಚ್ಚಳವಾಗಿದೆ.
ಒಂದು ರೀತಿಯಲ್ಲಿ, ದೇಶ ಬೆಲೆ ಏರಿಕೆಯೆಂಬ ಬೆಂಕಿಯಿಂದ ಬೇಯುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ರೇಶನ್ ಕಾರ್ಡ್ ಮೂಲಕ ಕನಿಷ್ಠ ಅಕ್ಕಿಯಾದರೂ ಸುಲಭವಾಗಿ ದೊರೆಯುತ್ತದೆ. ಇನ್ನೊಂದೆಡೆ ಶ್ರೀಮಂತರಿಗೆ ಈ ಬೆಲೆ ಏರಿಕೆ ಸಮಸ್ಯೆ ಅಷ್ಟಾಗಿ ತಗಟ್ಟುವುದಿಲ್ಲ. ಹೀಗಿರುವಾಗ ಯುವ ಮಧ್ಯಮ ವರ್ಗದವರು. ಇವರೇ ಈ ಬೆಲೆ ಏರಿಕೆಯ ಬಲಿ ಪಶುಗಳು. ಇವರ ಜೊತೆಗೇ ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವವರು ಈ ಬೆಲೆ ಏರಿಕೆಯಿಂದ ಕಷ್ಟಕ್ಕೆ ಸಿಲುಕಿದ್ದಾರೆ. ರೇಶನ್ ಕಾರ್ಡ್ನ ಅಕ್ಕಿಯನ್ನು ಬಿಟ್ಟು ಉಳಿದ ಯಾವ ವಸ್ತುವನ್ನೂ ಖರೀದಿಸಲೂ ಭಯಪಡುವಂಥ ಪರಿಸ್ಥಿತಿ ಬಡವರಿಗೆ ನಿರ್ಮಾಣವಾಗಿದೆ. ಇದೀಗ ಹಾಲು ಮತ್ತು ಅದರ ಉತ್ಪನ್ನಗಳು ಬೆಲೆ ಏರಿಸಿಕೊಂಡು ಕೂತಿವೆ. ಬಸ್ಸುಗಳ ಸೀಟು ಸುಡುವಂತಾಗಿದೆ. ಇದು ಸರಕಾರಗಳ ದಬ್ಬಾಳಿಕೆ. ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಚ್ಚಾ ತೈಲವು ಬ್ಯಾರಲ್ಗೆ 70 ಡಾಲರ್ನಲ್ಲಿ ಸಿಗುತ್ತಿದ್ದರೂ ಕೇಂದ್ರ ಸರಕಾರ ತೈಲಬೆಲೆ ಇಳಿಸದೇ ಜನರ ಬದುಕಿಗೆ ಕೊಳ್ಳಿ ಇಡುತ್ತಿದೆ.












