ಸನ್ಮಾರ್ಗ ವಾರ್ತೆ
ಗಂಟೆಗೆ 153 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಜಮ್ಮು-ಕಾಶ್ಮೀರದ ಉಮ್ರಾನ್ ಮಲಿಕ್ ಈ ಬಾರಿಯ ಐಪಿಎಲ್ ನಲ್ಲಿ ಅತಿ ವೇಗದ ಬೌಲಿಂಗ್ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
21 ವರ್ಷದ ಉಮ್ರಾನ್ ಮಲಿಕ್ ತನ್ನ ಮೊದಲ ಓವರ್‌ನಲ್ಲಿ 146 ಕಿಲೋಮೀಟರ್ ವೇಗದಲ್ಲಿ ಎಸೆತ ಎಸೆದ ಬಳಿಕ ಅದೇ ಓವರ್‌ನಲ್ಲಿ ಎರಡು ಬಾರಿ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ನಡೆಸಿದರು.
ಕೆಕೆಆರ್ ವಿರುದ್ಧ ಅತಿವೇಗದ ಎಸೆತದ ಮೂಲಕ ಉಮ್ರಾನ್ ಮಲಿಕ್ ಎಲ್ಲರ ಗಮನಸೆಳೆದಿದ್ದಾರೆ ಎಂದು ಐಪಿಎಲ್ ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದೆ.
ಉಮ್ರಾನ್ ಮಲಿಕ್‌ರನ್ನು ನೆಟ್ ಪ್ರಾಕ್ಟೀಸ್ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು.ಆದರೆ ಟಿ.ನಟರಾಜನ್ ಕೋವಿಡ್ ಕಾರಣದಿಂದ ಆಡಲು ಲಭ್ಯವಿರಲಿಲ್ಲ. ಇದರಿಂದಾಗಿ ಮಲಿಕ್‌ಗೆ ಆಡುವ ಅವಕಾಶ ಸಿಕ್ಕಿತು ಎಂದು ಕೋಚ್ ರಣಧೀರ ಸಿಂಗ್ ಹೇಳಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಈ ಯುವ ಪ್ರತಿಭೆ ಮನೆಮಾತಾಗಿದ್ದಾರೆ.
ಮಗ ಜಮ್ಮು-ಕಾಶ್ಮೀರ ಮಾತ್ರವಲ್ಲದೆ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾನೆ ಎಂದು ತಂದೆ ಅಬ್ದುಲ್ ರಶೀದ್ ಬಣ್ಣಿಸಿದ್ದಾರೆ. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೂಡ ಈತನ ಯಶಸ್ಸನ್ನು ಅಭಿನಂದಿಸಿದ್ದಾರೆ. ದೇವದತ್ತ ಪಡಿಕ್ಕಲ್ ಅವರಿಗೆ ಬೌಲಿಂಗ್ ಮಾಡಲಾದ 9ನೇ ಓವರ್‌ನ ನಾಲ್ಕನೇ ಎಸೆತವು 153 ಕಿಲೋ ಮೀಟರ್ ವೇಗ ಹೊಂದಿತ್ತು.