ವಿದ್ಯೆಯು ಪರಿಶುದ್ಧವಾದ ವ್ಯಾವಹಾರಿಕ ಬದುಕಿಗೆ ಪೂರಕ

0
516

ಸನ್ಮಾರ್ಗ ಲೇಖನ ವಿಭಾಗ

ಸರಿತಾ ಡಿಸೋಜಾ

ಜೀವನವೆಂದರೆ ಹರಿಯುವ ನದಿ ಎಂಬರ್ಥವಿದೆ. ಅದು ಬದುಕಿನ ಲಕ್ಷ್ಯಕ್ಕೆ ಮಾದರಿ ಆದುದರಿಂದಲೇ ಬದುಕನ್ನು ಜೀವನ ಎನ್ನವರು. ಬದುಕುವುದು ಒಂದು ಕಲೆ ಎಂತೋ ಬದುಕುವುದು ಜೀವನ ನಿರ್ವಹಣೆಯಾಗಬಹುದಲ್ಲದೆ ಅರ್ಥಪೂರ್ಣ ಜೀವನವಾಗಲಾರದು. ಕೌಟುಂಬಿಕ ಹೊಣೆಗಾರಿಕೆ, ಆತ್ಮೀಯ ಬಂಧನ, ಸಾಮಾಜಿಕ ಬದ್ಧತೆ, ಆರ್ಥಿಕ ಸಮತೋಲನ ಇವೆಲ್ಲವೂ ಬದುಕಿನಲ್ಲಿ ರೂಢಿಸಿಕೊಳ್ಳಬೇಕಾದ ಕಲೆ. ಅವುಗಳನ್ನು ಸಮತೋಲನದಲ್ಲಿ ನಿರ್ವಹಿಸುವುದೇ ಕಲಾತ್ಮಕ ಬದುಕಾಗಬಹುದು.

ಪ್ರತಿಯೊಬ್ಬನ ಬಾಳಿನಲ್ಲಿ ವಿದ್ಯೆ ಪ್ರಧಾನ ಪಾತ್ರವಹಿಸುತ್ತದೆ. ಕಾಗುಣಿತ ಗಣಿತವು ಬಾಲ್ಯದ ವಿದ್ಯಾಭ್ಯಾಸದಿಂದ ದೊರೆತರೆ ಅದರ ಬೆಳವಣಿಗೆ ಮಾತ್ರವೇ ವಿದ್ಯಾಭ್ಯಾಸವೆಂದು ಭಾವಿಸಿ ಸೀಮಿತ ಪರಿಮಿತಿಯೊಳಗೆ ಕಟ್ಟಿಡುವ ಮನೋಭಾವನೆಯನ್ನು ನಾವು ತಳೆಯುತ್ತೇವೆ. ಆದರೆ ವಿದ್ಯೆಯೆಂಬುದು ಪರಿಶುದ್ಧವಾದ ವ್ಯಾವಹಾರಿಕ ಬದುಕಿಗೆ ಪೂರಕ ಅಂಶ ಎಂಬುದನ್ನು ಅರ್ಥೈಸದೇ ಹೋದರೆ ಆ ವಿದ್ಯೆ ಸಾರ್ಥಕತೆಯನ್ನು ಪಡೆಯುವುದಿಲ್ಲ. ಅಕ್ಷರ ಜ್ಞಾನವು ಓದುವಿಕೆಗೆ ಹಾಗೂ ಗಣಿತ ಗಣನೆಗೆ ಮೀಸಲಾದರೂ ಆ ಓದು ವ್ಯಕ್ತಿಯನ್ನು ವೈವಿಧ್ಯಮಯ ನಿಟ್ಟಿನಲ್ಲಿ ಬೆಳೆಸಲು ಹೆತ್ತವರು ಹಾಗೂ ಶಿಕ್ಷಕರ ಪಾತ್ರ ಬಹಳ ಪ್ರಮುಖ್ಯ ವಹಿಸುತ್ತದೆ. ಬದಲಾಗುತ್ತಿರುವ ಸಮಾಜಕ್ಕೆ ಹೊಂದಿಕೊಳ್ಳುವಂತೆ ವಿದ್ಯಾಭ್ಯಾಸದ ವಾತಾವರಣ ನಿರ್ಮಾಣಗೊಳ್ಳುವುದು ಅನಿವಾರ್ಯ ಅದು ಕೇವಲ ಶಾಲೆಗಳಲ್ಲಿ ಮಾತ್ರ ಬದಲಾಗುವುದಲ್ಲ. ಶಾಲಾ-ಕಾಲೇಜುಗಳಲ್ಲಿ ಗಳಿಸಿದ ವಿದ್ಯೆಗೆ ಕುಸುರಿಯ ಸೌಂದರ್ಯ ಕಲ್ಪಿಸುವ ಅವಕಾಶ ಮನೆಯಲ್ಲೇ ಆಗಿರುತ್ತದೆ. ವಿದ್ಯೆಯನ್ನು ಗಳಿಸುವ ಮೂಲಕ ವ್ಯಕ್ತಿಯೊಬ್ಬ ಏನಾಗಬೇಕು ಎಂಬಷ್ಟೇ ಅಲ್ಲ ಹೇಗೆ ಬದುಕಬೇಕೆಂಬುದು ಪ್ರಧಾನವಾಗುತ್ತದೆ.

ವಿದ್ಯಾ ಕ್ಷೇತ್ರದಲ್ಲಿ ಪ್ರತಿಭಾನ್ವಿತರೆನಿಸಿದವರು ವ್ಯವಹಾರಿಕ ಕ್ಷೇತ್ರದಲ್ಲಿ ಸೋಲುತ್ತಿರುವುದನ್ನು ನಾವು ಸಾಮಾನ್ಯವಾಗಿ ಗಮನಿಸಬಹುದಾಗಿದೆ. ಉನ್ನತ ಉದ್ಯೋಗಿಯು ಆರ್ಥಿಕ ನಿರ್ವಹಣೆಯಲ್ಲಿ ಸೋಲುವ ಅಥವಾ ಅನಪೇಕ್ಷಿತ ಕ್ಷೇತ್ರಗಳಲ್ಲಿ ಸುರಿದು ಕೈಸುಟ್ಟುಕೊಳ್ಳುವ ಉದಾಹರಣೆಗಳು ನಿತ್ಯ ಎದುರಾಗುತ್ತಿವೆ. ವಾಸ್ತವಿಕತೆಯನ್ನು ಇಂದಿನ ಜನತೆಗೆ ಓದಿಸುವ ಬದ್ಧತೆಯನ್ನು ಹೆತ್ತವರು ವಹಿಸಲೇಬೇಕು. ಬದುಕು ಕಲೆಯಾಗಬೇಕು ಬದುಕುನಲ್ಲಿ ವಿದ್ಯೆ ಸ್ವರ್ಣಾಭರಣವಾಗಬೇಕು. ಆ ಮೂಲಕ ಕಲಾತ್ಮಕ ಬದುಕು ಹಾಗೂ ವಿದ್ಯೆ ಸಮ್ಮಿಳಿತವಾಗಬೇಕು. ಅದಕ್ಕೆ ಶಾಲೆ-ಶಿಕ್ಷಕರು ಹಾಗೂ ರಕ್ಷಕರು ಪ್ರೇರಕರಾಗಬೇಕು ಮತ್ತು ಮಾರ್ಗದರ್ಶಕರಾಗಬೇಕು. ಆ ಮೂಲಕ ವಿದ್ಯಾಭ್ಯಾಸದ ಜೀವನಕ್ಕೆ ಹೆದ್ದಾರಿಯಾಗಬೇಕು.

ಸರಿತಾ ಡಿಸೋಜಾ,
ಸಂತ ಅಲೋಶಿಯಸ್ ಮಂಗಳೂರು