ಪೊಲೀಸರ ನಡುವೆಯೇ ಗುಂಪುಗಾರಿಕೆ- ಆಂತರಿಕ ಭಿನ್ನಾಭಿಪ್ರಾಯ-ಕರ್ತವ್ಯ ಲೋಪ: ಸಸ್ಪೆಂಡ್ ಸೇರಿದಂತೆ ವರ್ಗಾವಣೆ ಮಾಡಿದ ಮಂಗಳೂರು ಪೊಲೀಸ್ ಕಮಿಷನರ್

0
535
ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್

ಸನ್ಮಾರ್ಗ ವಾರ್ತೆ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ, 26 ಮಂದಿಯನ್ನು ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.

ದಿನಾಂಕ 26.08.2021 ರಂದು ಸಂಜೆ ಮಹಿಳಾ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣೆಯಲ್ಲಿ ಮದ್ಯಪಾನ ಮಾಡಿ ಪಾರ್ಟಿ ನಡೆಸಿರುವುದು ಠಾಣೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯ ಪರಿಶೀಲನೆಯಿಂದ ಹಾಗೂ ಎಸಿಪಿ, ಕೇಂದ್ರ ಉಪ-ವಿಭಾಗರವರು ಸಲ್ಲಿಸಿರುವ ಪ್ರಾಥಮಿಕ ವಿಚಾರಣೆಯಿಂದ  ಆರೋಪವು ಮೇಲ್ನೋಟಕ್ಕೆ ಧೃಡಪಟ್ಟಿದೆ. ಅಲ್ಲದೇ, ಪಾಂಡೇಶ್ವರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಿನಾಂಕ: 27.07.2021 ರಂದು ದಾಖಲಾದ ಪ್ರಕರಣ ಸಂ. 57/2021 ಕಲಂ 354 ಐಪಿಸಿ & ಕಲಂ 12 ಪೋಕ್ಸೋ ಕಾಯಿದೆ ಪ್ರಕರಣದಲ್ಲಿ ಓರ್ವ ಸಿಹೆಚ್‌ಸಿ, ಕಂಕನಾಡಿ ನಗರ ಪೊಲೀಸ್‌ ಠಾಣೆಯವರನ್ನು ದಿನಾಂಕ: 29.07.2021 ರಂದು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಸದರಿ ಪ್ರಕರಣದಲ್ಲಿ ದಿನಾಂಕ: 15.11.2021   ರಂದು ಮಾನ್ಯ ನ್ಯಾಯಾಲಯಕ್ಕೆ ಚಾರ್ಜ್ ಸಲ್ಲಿಸಲಾಗಿರುತ್ತದೆ ಹಾಗೂ ಸಿಹೆಚ್‌ಸಿ ರವರ ವಿರುದ್ದ ಇಲಾಖಾ ವಿಚಾರಣೆಯನ್ನು ಸಹಾ ನಡೆಸಲಾಗುತ್ತಿದೆ. ಸದರಿ ಪ್ರಕರಣದ ತನಿಖಾಧಿಕಾರಿಯಾದ ರೋಸಮ್ಮ, ಮಹಿಳಾ ಪಿಎಸ್‌ಐ ರವರ ಕರ್ತವ್ಯ ಲೋಪದ ಕುರಿತು ಎಸಿಪಿ, ಕೇಂದ್ರ ಉಪ-ವಿಭಾಗರವರು ಪರಿಶೀಲಿಸಿ ವರದಿಯನ್ನು ಸಲ್ಲಿಸಿರುತ್ತಾರೆ ಹಾಗೂ ಈ ಮೇರೆಗೆ ಡಿಸಿಪಿ(ಕಾನೂನು & ಸುವ್ಯವಸ್ಥೆ) ರವರು ಸಹಾ ವರದಿಯನ್ನು ಸಲ್ಲಿಸಿದ್ದಾರೆ.

ಈ ಎರಡು ಪ್ರತ್ಯೇಕ ಘಟನೆಗಳಲ್ಲಿ ಕರ್ತವ್ಯ ಲೋಪ ಹಾಗೂ ಠಾಣೆಯಲ್ಲಿನ ಅಧಿಕಾರಿ / ಸಿಬ್ಬಂದಿಗಳ ಅಶಿಸ್ತು ಸಾಬೀತಾದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್‌ ಠಾಣೆಯ ಮಹಿಳಾ ಪಿಎಸ್‌ಐ, ರೋಸಮ್ಮ ಹಾಗೂ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ಹಾಗೂ ತನೆಯಲ್ಲಿಂಪರ್ಟಿ ಮಾಡಿ ಮದ್ಯಪಾನ ಮಾಡಿದ ಆರೋಪದಲ್ಲಿ ಬಾಬು ನಾಯ್ಕ & ದಯಾನಂದ ಎಂಬ ಇಬ್ಬರು ಎಎಸ್‌ಐ, ರವಿಚಂದ್ರ, ಸಿಹೆಚ್‌ಸಿ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿಯವರುಗಳನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.

ಅಲ್ಲದೇ, ಪಾಂಡೇಶ್ವರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟು 32 ಅಧಿಕಾರಿ / ಸಿಬ್ಬಂದಿಗಳನ್ನು ( ಅಮಾನತು ಗಿಂದರು ಸೇರಿ) ಬೇರೆ ಬೇರೆ ಠಾಣೆಗೆ ವರ್ಗಾವಣೆಗೊಳಿಸಲಾಗಿರುತ್ತದೆ ಹಾಗೂ ಹೊಸದಾಗಿ 2 ಪಿಎಸ್ ಐ ಹೆಚ್‌ಸಿ 1 ಹಾಗೂ 16 ಪಿಸಿ ಸಿಬ್ಬಂದಿಗಳಿಗೆ ಮಹಿಳಾ ಪೊಲೀಸ್‌ ಠಾಣೆಗೆ ನಿಯುಕ್ತಿಗೊಳಿಸಲಾಗಿರುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಮಹಿಳಾ ಪೊಲೀಸ್‌ ಠಾಣೆಯ ಪಿಐ, ರೇವತಿಯವರಿಗೆ ಅಪಘಾತವಾಗಿದ್ದು, 2 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿರುವ ಕಾರಣ ಸಿಸಿಆರ್‌ಬಿ ವಿಭಾಗದ ಪೊಲೀಸ್‌ ನಿರೀಕ್ಷರಿಗೆ ಮಹಿಳಾ ಪೊಲೀಸ್‌ ಠಾಣೆಯ ಹೆಚ್ಚುವರಿ ಪ್ರಭಾರವನ್ನು ವಹಿಸಲಾಗಿದೆ ಹಾಗೂ ಇಬ್ಬರು ಪಿಎಸ್‌ಐ ರವರುಗಳನ್ನು ಮಹಿಳಾ ಪೊಲೀಸ್‌ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್‌ ಠಾಣೆಯು 1994 ನೇ ಇಸವಿಯಲ್ಲಿ ಕಾರ್ಯಾರಂಭಗೊಂಡಿರುತ್ತದೆ. ಮಹಿಳಾ ಪೊಲೀಸ್‌ ಠಾಣೆಯು ಸೂಕ್ಷ್ಮ ಪೊಲೀಸ್‌ ಠಾಣೆಯಾಗಿದ್ದು, ಮಹಿಳೆ ಮತ್ತು ಮಕ್ಕಳ ಸಂಸ್ಥೆಗಳು ಹಾಗೂ ಪ್ರಕರಣಗಳು ಇಲ್ಲಿ ಬರುವುದರಿಂದ, ತನಿಖೆಯಲ್ಲಿನ ಲೋಪ, ಅಶಿಸ್ತು ಗುಂಪುಗಾರಿಕೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಠಾಣೆಯ ಕರ್ತವ್ಯದಲ್ಲಿ ಗುಣಮಟ್ಟ ಸುಧಾರಣೆಗಾಗಿ ಮತ್ತು ನ್ಯಾಯ ಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ಕರ್ತವ್ಯ ನಿರ್ವಹಣೆ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.